ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ನನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಕೊಲೆಯಾಗಿದ್ದು, ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ನಡೆದಿದೆ ಎನ್ನಲಾಗಿದೆ.
ಕೊಲೆ ಮಾಡಿದ ಆರೋಪಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ರ್ಯಾಡಿಸ್ ಹೋಟೆಲ್ನಲ್ಲಿ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈಗ ಪೊಲೀಸರು ದರ್ಶನ್ ಅವರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ. ಈ ಹಿನ್ನೆಲೆ ನಟ ದರ್ಶನ್, ಚಿತ್ರದುರ್ಗದ ದರ್ಶನ್ ಫ್ಯಾನ್ ಸಂಘಟನೆ ಅಧ್ಯಕ್ಷನಿಗೆ ಫೋನ್ ಕಾಲ್ ಮಾಡಿ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನ ಕರೆತರುವಂತೆ ಹೇಳಿದ್ದರು.ಬೆಂಗಳೂರಿಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದು ವಿನಯ್ ಎನ್ನುವವರಿಗೆ ಸೇರಿದ ಶೆಡ್ನಲ್ಲಿ ಇರಿಸಿದ್ದರು.
ರೇಣುಕಾಸ್ವಾಮಿಗೆ ದರ್ಶನ್ ಸೇರಿ 4 ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆ ಬಳಿಕ ರೇಣುಕಾಸ್ವಾಮಿಗೆ ಬಲವಾದ ಆಯುಧದಿಂದ ಶೆಡ್ನಲ್ಲೇ ಹಲ್ಲೆ ಮಾಡಿ ಜೂನ್ 8ರ ಶನಿವಾರ ರಾತ್ರಿ ಕೊಲೆ ಮಾಡಲಾಗಿದೆ. ನಂತರ ಕಾಮಾಕ್ಷಿ ಪಾಳ್ಯದ ಮೋರಿಯಲ್ಲಿ ಮೃತದೇಹ ಎಸೆಯಲಾಗಿದೆ. ಭಾನುವಾರ ಬೆಳಗಿನ ಜಾವ ರೇಣುಕಾಸ್ವಾಮಿ ಶವವನ್ನ ನಾಯಿಗಳು ಎಳೆಯುತ್ತಿದ್ದಾಗ ಮೃತದೇಹ ಪತ್ತೆಯಾಗಿತ್ತು.
ಸದ್ಯ ಕಾಮಾಕ್ಷಿ ಪಾಳ್ಯ ಸ್ಟೇಷನ್ಗೆ ರೇಣುಕಾಸ್ವಾಮಿ ಪೋಷಕರು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ. ವಿಜಯನಗರ ಎಸಿಪಿ ಚಂದನ್ ತಂಡದಿಂದ ದರ್ಶನ್ ವಶಕ್ಕೆ ಪಡೆಯಲಾಗಿದೆ.