ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಸಮಿತಿಯು ನಿರೀಕ್ಷೆಯಂತೆ ರಿಪೋ ದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಮೊನ್ನೆಯಿಂದ ನಡೆದ ಆರ್ಬಿಐ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಆರ್ಬಿಐನ ರಿಪೋ ದರ ಅಥವಾ ಬಡ್ಡಿದರವು ಶೇ. 5.25ರಲ್ಲಿ ಮುಂದುವರಿಯಲಿದೆ. ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇದ್ದರಿಂದ ಬಡ್ಡಿದರ ಇಳಿಸದೇ ಇರುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಎಂಪಿಸಿ ಸಭೆ ಬಳಿಕ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಪತ್ರಿಕಾಗೋಷ್ಠಿ ಕರೆದು ಪಾಲಿಸಿ ನಿರ್ಧಾರಗಳನ್ನು ಪ್ರಕಟಿಸಿದರು. ಹಾಗೆಯೇ, 2026-27ರ ವರ್ಷಕ್ಕೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಎಷ್ಟಾಗಬಹುದು ಎಂದು ಮಾಡಲಾಗಿರುವ ಅಂದಾಜನ್ನೂ ಬಹಿರಂಗಪಡಿಸಿದರು.
ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.6 ಇರಬಹುದು ಎಂದು ಆರ್ಬಿಐ ಪ್ರೊಜೆಕ್ಟ್ ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 4, ಎರಡನೇ ಕ್ವಾರ್ಟರ್ನಲ್ಲಿ ಶೇ. 4.4, ಮೂರನೇ ಕ್ವಾರ್ಟರ್ನಲ್ಲಿ ಶೇ. 5.2, ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 4.7ರಷ್ಟು ಹಣದುಬ್ಬರ ಇರಬಹುದು ಎನ್ನುವುದು ಆರ್ಬಿಐ ಎಂಪಿಸಿಯಲ್ಲಿ ಬಂದಿರುವ ಅಭಿಪ್ರಾಯ.
ಈ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಸರಾಸರಿಯಾಗಿ ಶೇ. 6.9 ಜಿಡಿಪಿ ಬೆಳೆಯಬಹುದು ಎಂದು ಆರ್ಬಿಐ ಈ ಬಾರಿ ಅಂದಾಜು ಮಾಡಿದೆ. ಮೊದಲ ಕ್ವಾರ್ಟರ್ನಲ್ಲಿ ಶೇ. 6.8, ಎರಡನೇ ಕ್ವಾರ್ಟರ್ನಲ್ಲಿ ಶೇ. 6.7, ಮೂರನೇ ಕ್ವಾರ್ಟರ್ನಲ್ಲಿ ಶೇ. 7 ಮತ್ತು ನಾಲ್ಕನೇ ಕ್ವಾರ್ಟರ್ನಲ್ಲಿ ಶೇ. 7.2ರಷ್ಟು ಆರ್ಥಿಕತೆ ಬೆಳೆಯಬಹುದು ಎಂದು ಸಂಜಯ್ ಮಲ್ಹೋತ್ರಾ ತಿಳಿಸಿದರು.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಪ್ರಸ್ತಾಪಿಸಿದ ಆರ್ಬಿಐ ಗವರ್ನರ್, ಪ್ರಸಕ್ತ ವರ್ಷದ ಆರ್ಥಿಕ ಬೆಳವಣಿಗೆಯ ಮೇಲೆ ಈ ಬಿಕ್ಕಟ್ಟು ಪರಿಣಾಮ ಬೀರುವ ಸಾಧ್ಯತೆಯನ್ನು ವಿವರಿಸಿದರು. ಬಿಕ್ಕಟ್ಟಿನಿಂದ ವಿವಿಧ ಕ್ಷೇತ್ರಗಳನ್ನು ರಕ್ಷಿಸಲು ಸರ್ಕಾರ ತೆಗೆದುಕೊಂಡಿರುವ, ತೆಗೆದುಕೊಳ್ಳುತ್ತಿರುವ ವಿವಿಧ ಕ್ರಮಗಳನ್ನು ಅವರು ಸ್ವಾಗತಿಸಿದರು.
ರಿಪೋ ದರದ ಯಥಾಸ್ಥಿತಿ: ಆರ್ಬಿಐ ಗವರ್ನರ್



