ಕೋಲಾರ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಇಂಧನ ಹಾಗೂ ಎಲ್ಪಿಜಿ ಗ್ಯಾಸ್ ಸಮಸ್ಯೆಯನ್ನು ಮುಂದಿಟ್ಟುಕೊAಡು ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃತಕ ಅಭಾವ ಸೃಷ್ಟಿಸಬಾರದು ಮತ್ತು ಕಾಳಸಂತೆಯಲ್ಲಿ ಇವನ್ನು ಮಾರಾಟ ಮಾಡದಂತೆ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ವರ್ತಕರಿಗೆ ಹಾಗೂ ಗ್ಯಾಸ್ ವಿತರಕರಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಗ್ಯಾಸ್ ಏಜೆನ್ಸಿ ಮಾಲೀಕರು, ಪೆಟ್ರೋಲ್ ಬಂಕ್ ಮಾಲೀಕರು, ಪ್ರಮುಖ ವರ್ತಕರ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಯುದ್ಧದ ನೆಪವೊಡ್ಡಿ ಯಾವುದೇ ಕಾರಣಕ್ಕೂ ಎಲ್ಪಿಜಿ ಸಿಲಿಂಡರ್ ಅಥವಾ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟುಕೊAಡು ಕೃತಕ ಅಭಾವ ಸೃಷ್ಟಿಸಬಾರದು. ಅಕ್ರಮ ದಾಸ್ತಾನು ಪತ್ತೆಯಾದಲ್ಲಿ ‘ಅಗತ್ಯ ವಸ್ತುಗಳ ಕಾಯ್ದೆ’ (Essential Commodities) ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಗಟು ವರ್ತಕರು ಮತ್ತು ಗ್ಯಾಸ್ ವಿತರಕರು ತಮ್ಮ ಬಳಿ ಲಭ್ಯವಿರುವ ಒಟ್ಟು ದಾಸ್ತಾನಿನ ವಿವರವನ್ನು ಸಾರ್ವಜನಿಕರಿಗೆ ತಿಳಿಯುವಂತೆ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಸಾರ್ವಜನಿಕರಲ್ಲಿ ಗ್ಯಾಸ್ ಸಿಗುವುದಿಲ್ಲ ಎಂಬ ಭಯ ಅಥವಾ ಗೊಂದಲ ಮೂಡಿಸಬಾರದು. ಜನರು ಆತಂಕಗೊAಡು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡದಂತೆ ಜಾಗೃತಿ ಮೂಡಿಸಲು ವಿತರಕರಿಗೆ ಸೂಚಿಸಲಾಯಿತು.
ಪ್ರಸ್ತುತ ಗ್ಯಾಸ್ ವಿತರಣೆಯಲ್ಲಿ ಹೊಸ ನಿಯಮ ಜಾರಿಗೆ ಬಂದಿದ್ದು, ಒಂಟಿ ಸಿಲಿಂಡರ್ ಸಂಪರ್ಕ ಹೊಂದಿರುವವರು 25 ದಿನಗಳ ನಂತರ ಹಾಗೂ ಡಬಲ್ ಸಿಲಿಂಡರ್ ಹೊಂದಿರುವವರು 30 ದಿನಗಳ ನಂತರವಷ್ಟೇ ಮರು ಬುಕ್ಕಿಂಗ್ ಮಾಡಲು ಅವಕಾಶವಿದೆ. ಸರ್ಕಾರಿ ಆಸ್ಪತ್ರೆಗಳು, ವಿದ್ಯಾರ್ಥಿನಿಲಯಗಳು (ಹಾಸ್ಟೆಲ್ಗಳು), ಅಂಗನವಾಡಿಗಳು ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ಕಮರ್ಷಿಯಲ್ ಸಿಲಿಂಡರ್ಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಇಂಡಕ್ಷನ್ ಸ್ಟೌವ್ ಅಥವಾ ಎಲೆಕ್ಟ್ರಿಕ್ ಒಲೆಗಳಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಜಿಲ್ಲಾ ಪಂಚಾಯತ್ ಜಿಲ್ಲಾ ಪಂಚಾಯತ್ ಸಿಇಒ ಅವರ ನೇತೃತ್ವದಲ್ಲಿ ಆಹಾರ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಗೊತ್ತುಪಡಿಸಿದ ತಂಡ (Core Group) ರಚಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ತಮ್ಮ ವ್ಯಾಪ್ತಿಯ ಅಂಗಡಿ ಮತ್ತು ಗೋದಾಮುಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲನೆ ನಡೆಸಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕಣ್ಣಿಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಎಲ್ಲಾ ತಹಸೀಲ್ದಾರ್ಗಳು, ಕೋಲಾರ ಪುರಸಭೆ ಆಯುಕ್ತರು ನವೀನ್ ಚಂದ್ರ, ಎಲ್ಲಾ ಆಹಾರ ನಿರೀಕ್ಷಿಕರು, ಆಹಾರ ಇಲಾಖೆಯಉಪನಿರ್ದೇಶಕ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಶ್ರೀನಿವಾಸನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲೆಯ ಗ್ಯಾಸ್ ವಿತರಕರು, ಅಗತ್ಯ ವಸ್ತುಗಳ ವಿತರಕರು ಹಾಗೂ ಪ್ರಮುಖ ವರ್ತಕರು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ಗ್ಯಾಸ್, ಅಗತ್ಯ ವಸ್ತುಗಳ ಅಭಾವ ಸೃಷ್ಟಿಸದಂತೆ ವರ್ತಕರಿಗೆ ಮನವಿ



