ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ದೊರೆಯುತ್ತಿರುವ ವಿಐಪಿ ಸೌಲಭ್ಯಗಳು ಮತ್ತು ಮೊಬೈಲ್ ಫೋನ್ಗಳು ದೇಶದ ಭದ್ರತೆಗೆ ಗಂಭೀರ ಸವಾಲೊಡ್ಡಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ನಟೋರಿಯಸ್ ಕ್ರಿಮಿನಲ್ ಉಮೇಶ್ ರೆಡ್ಡಿ ಮೊಬೈಲ್ ಬಳಸುತ್ತಾ, ಟಿವಿ ನೋಡುತ್ತಾ ಇರುವ ವಿಡಿಯೋ, ಲಷ್ಕರ್ ಉಗ್ರ ಮೊಬೈಲ್ ಬಳಸುತ್ತಿರುವ ವಿಡಿಯೋ ಬೆಳಕಿಗೆ ಬಂದ ಸಂದರ್ಭದಲ್ಲಿ ಎಸ್.ಕೆ. ಉಮೇಶ್ ಅವರು `ಟಿವಿ೯’ಗೆ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ, ಸುಮಾರು ೩೫ ವರ್ಷಗಳ ಕಾಲ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್.ಕೆ. ಉಮೇಶ್ ಅಭಿಪ್ರಾಯ ಹಂಚಿಕೊAಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ. ಹಿಂದೆ ಕೂಡ ಜೈಲುಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿದ್ದವು. ಆದರೆ, ಜೈಲಿನೊಳಗೆ ಮೊಬೈಲ್ ಬಳಕೆ ಮತ್ತು ಇತರ ವಿಐಪಿ ಸೌಲಭ್ಯಗಳು ದೇಶದ ದೃಷ್ಟಿಯಿಂದ ಅಭದ್ರತೆಯನ್ನು ಸೃಷ್ಟಿಸುತ್ತವೆ ಎಂದು ಅವರು ಒತ್ತಿ ಹೇಳಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜೈಲಿನ ಆಡಳಿತವನ್ನು ಸುಧಾರಿಸಲು, ಜೈಲು ಅಧೀಕ್ಷಕರ ಹುದ್ದೆಗೆ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಬೇಕು ಎಂದು ಉಮೇಶ್ ಸಲಹೆ ನೀಡಿದ್ದಾರೆ. ಪ್ರಸ್ತುತ ಜೈಲರ್ ಆಗಿ ಅಡಿಷನಲ್ ಡಿಸಿ ಕಾರ್ಯನಿರ್ವಹಿಸುತ್ತಿದ್ದು, ಐಪಿಎಸ್ ಅಧಿಕಾರಿಯ ನೇಮಕದಿಂದ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂಬುದು ಅವರ ಅನಿಸಿಕೆ. ಇತ್ತೀಚೆಗೆ ದರ್ಶನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಠಿಣ ನಿಲುವು ತೆಗೆದುಕೊಂಡಿದ್ದರೂ, ಹಲವು ಜೈಲುಗಳಲ್ಲಿ ಇಂತಹ ವಿಐಪಿ ಸೌಲಭ್ಯಗಳು ಮುಂದುವರಿದಿರುವುದು ಆಶ್ಚರ್ಯಕರ ಸಂಗತಿ.
ಕೈದಿಗಳಿಗೆ ಊಟ ಅಥವಾ ಇತರ ಸಣ್ಣಪುಟ್ಟ ಸೌಲಭ್ಯಗಳನ್ನು ಒದಗಿಸುವುದು ತಪ್ಪಲ್ಲ. ಆದರೆ, ಹೊರಗಿನಿಂದ ತಾಜ್ ಹೋಟೆಲ್?ನಿಂದ ಕೇಕ್ ತರಿಸಿ ಹುಟ್ಟುಹಬ್ಬ ಆಚರಿಸುವಂತಹ ಘಟನೆಗಳು ಜೈಲಿನ ನಿಯಮಾವಳಿಗಳನ್ನು ಉಲ್ಲಂಘಿಸಿವೆ ಎಂದು ಉಮೇಶ್ ಖಂಡಿಸಿದ್ದಾರೆ. ಇಂತಹ ಸೌಲಭ್ಯಗಳು ಜೈಲಿನ ಮೂಲ ಉದ್ದೇಶವನ್ನೇ ಹಾಳುಮಾಡುತ್ತವೆ. ಜೈಲು ಎಂದರೆ ನಿಯಮಗಳಿಗೆ ಬದ್ಧವಾಗಿರಬೇಕು. ಜೈಲಿನ ಆಡಳಿತಾಧಿಕಾರಿಗಳು ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.



