ಬೆಂಗಳೂರು: ಕನ್ನಡದ ಪ್ರಾಮುಖ್ಯತೆ ಬಗ್ಗೆ ಜನರಿಗೆ ಪರಿಣಾಮಕಾರಿಯಾಗಿ ತಿಳಿಸುವ ಕೆಲಸವಾಗಬೇಕಿದೆ ಎಂದು ಬಿಎಂಎಸ್ ಮಹಿಳಾ ಕಾಲೇಜಿನ ನಿವೃತ್ತ ಪ್ರೊ.ಎ.ಆರ್.ಶಿವಕುಮಾರ್ ಸಲಹೆ ನೀಡಿದ್ದಾರೆ.
ಸಿರಿಗನ್ನಡ ಮಿತ್ರ ತಂಡ ಸಂಸ್ಥೆ ಮಲ್ಲೇಶ್ವರದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬರೀ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮೂಲಕ ನಾವು ಹೆಮ್ಮೆಯಿಂದ ಬೀಗುವಂತಲ್ಲ. ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಆಚರಣೆಗೆ ಸೀಮಿತ ಮಾಡಿಕೊಳ್ಳದೆ ಕನ್ನಡವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಇನ್ನಷ್ಟು ಮುಂದಾಗಬೇಕಿದೆ ಎಂದರು.
ಹೊರ ರಾಜ್ಯದ ಜನರು ಸಹ ವಿಜೃಂಭಣೆಯಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಕಾರ್ಯ ಶ್ಲಾಘನೀಯ. ಹೊರ ರಾಜ್ಯಗಳಲ್ಲೂ ಕನ್ನಡವನ್ನು ಮಾತನಾಡಿರುವ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ. ಸ್ಥಳೀಯ ಸಂಸ್ಕೃತಿ ಬೇರು ಗಟ್ಟಿಯಾದರೆ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಕನ್ನಡದ ಅಸ್ತಿತ್ವದ ಜತೆಗೆ ಅಸ್ಮಿತೆಯು ಉಳಿಯುವ ಕಾರ್ಯವಾಗಬೇಕಿದೆ. ಕನ್ನಡವನ್ನು ಹೆಚ್ಚು ಬಳಸುವ ಮೂಲಕ ನಾವೆಲ್ಲರೂ ಭಾಷೆ ಉಳಿಸಲು ಮುಂದಾಗಬೇಕು ಎಂದರು.
ರೋಟರಿ ಮುನಿರಾಜು ಮಾತನಾಡಿ, ಅನೇಕ ಸವಾಲುಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಸ್ಮಿತೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲರೂ ಜಾಗೃತರಾಗುವ ಅವಶ್ಯಕತೆ ಇದೆ. ಎಲ್ಲರಲ್ಲಿಯೂ ಕನ್ನಡ ಅಭಿಮಾನ ಮೂಡಬೇಕು. ಅಖಂಡ ಕರ್ನಾಟಕದ ಸಮಗ್ರತೆ ಮತ್ತು ಎಕತೆಯಿಂದ ಭಾಷೆ, ನೆಲ, ಸಂಸ್ಕೃತಿ ಉಳಿಯುವಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಭಾಷೆಯನ್ನು ಮರೆಯಬಾರದು ಎಂದರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಮುನಿರಾಜು ಎನ್,ಬಿ. ಎಮ್. ಎಸ್ ಮಹಿಳಾ ಕಾಲೇಜಿನ ನಿವೃತ್ತ ಪ್ರೊಫೆಸರ್ ಶಿವಕುಮಾರ್, ಕಿರು ತೆರೆ ಕಲಾವಿದ ಎಂ. ಜಿ. ಫಣಿರಾಜ್ ಚಲನ ಚಿತ್ರ ಕಲಾವಿದ ಮತ್ತು ನಿರ್ದೇಶಕ ಚಿಕ್ಕಣ್ಣ. ಕನ್ನಡ ಅಭಿಮಾನಿ ಕೆ. ಇ. ಬಿ ರಾಜಣ್ಣ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಸತೀಶ್ ರೆಡ್ಡಿ, ಲೇಖಕ ಎಸ್. ಎಸ್. ಪಡಶೆಟ್ಟಿ, ಪ್ರಕಾಶರಾದ ಕೋ. ಲ. ರಂಗನಾಥ್ ರಾವ್,ಗಾಯಕ ರಮೇಶ್ ಮೂರ್ತಿ,ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಮೂರ್ತಿ, ನಿರ್ದೇಶಕ ಬಿ. ಎಲ್. ಶ್ರೀನಿವಾಸ,ಬೆಂಗಳೂರು ರಿಪೋರ್ಟ್ಸ ವೆಬ್ ಚಾನಲ್ ನ ಪ್ರಕಾಶ್, ಪತ್ರಕರ್ತ ವೆಂಕಟೇಶ ಆರ್.ದಾಸ್, ಸಿರಿಗನ್ನಡ ಮಿತ್ರ ತಂಡ ಸಂಸ್ಥೆಯ ಕಾರ್ಯದರ್ಶಿ ಕೌಡ್ಲೆ ನಾರಾಯಣ ಶೆಟ್ಟಿ ಪದಾಧಿಕಾರಿಗಳಾದ ವರದರಾಜು, ಬಿ. ಕೆ. ವಿನಯ್, ಕೆ. ಹರ್ಷ ಮತ್ತಿತರರು ಉಪಸ್ಥಿತರಿದ್ದರು.