ನೆಲಮಂಗಲ: ಕಸಬಾ ಹೋಬಳಿ ಗೋರಿನಬೆಲೆ ಗ್ರಾಮದ ರೈತರಿಗೆ ನೋಟಿಸ್ ನೀಡಿ ಸ್ಥಳಕ್ಕೆ ಬಾರದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರೈತರು ನೆಲಮಂಗಲ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಕಸಬಾ ಹೋಬಳಿ ಗೋರಿನಬೆಲೆ ಗ್ರಾಮದಿಂದ ಭಟ್ಟರಹಳ್ಳಿಗೆ ಹಾದು ಹೋಗುವ ನಕಾಶೆ ರಸ್ತೆ ಹಾಗೂ ಗುರುವನಹಳ್ಳಿಯಿಂದ ಮಂಚೇನಹಳ್ಳಿಗೆ ಹಾದು ಹೋಗುವ ನಕಾಶೆ ರಸ್ತೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಸ್ಥಳೀಯ ರೈತರಿಗೆ ತೊಂದರೆ ಕೊಡುತ್ತಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಗೋರಿನ ಬೆಲೆ ಗ್ರಾಮದ ರೈತರು ಸುಮಾರು ವರ್ಷಗಳಿಂದ ಹೋರಾಟ ನಡೆಸುತ್ತಿದರು.
ಈ ಬಗ್ಗೆ ಸರ್ವೆ ನಡೆಸಿರುವ ಕಂದಾಯ ಇಲಾಖೆ ನಕಾಶೆ ಕಂಡ ಕಾಲು ದಾರಿಯು ಪೂರ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ದಿನಾಂಕ:-06-02-2024 ರಂದು ನಿಗದಿಪಡಿಸಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸ್ಥಳಕ್ಕೆ ಹಾಜರಿರುವಂತೆ ರೈತರಿಗೆ ನೋಟಿಸ್ ನೀಡಿದರು.
ಆದರೆ ನೋಟಿಸ್ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳೇ ನಕಾಶೆಯ ತೆರವಿಗೆ ಬಾರದೆ ನಕಾಶೆ ರಸ್ತೆಯನ್ನು ತೆರವು ಮಾಡದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನೋಟಿಸ್ ನೀಡಿ ಸ್ಥಳಕ್ಕೆ ಬಾರದ ಅಧಿಕಾರಿಗಳ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ನೆಲಮಂಗಲ ತಾಲ್ಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ ಮಾಡಿ ಕೂಡಲೇ ರೈತರಿಗೆ ಅನ್ಯಾಯ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಅಗ್ರಹಿಸಿದರು.
ಗೋರಿನ ಬೆಲೆ ಗ್ರಾಮದ ರೈತ ದೀಪಕ್ ಮಾತನಾಡಿ 2018 ರಿಂದಲೂ ಅರ್ಜಿ ಸಲ್ಲಿಸಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ನಕಾಶೆ ರಸ್ತೆ ಬಿಡಿಸುವುದರಿಂದ ಗೊರಿನ ಬೆಲೆ ಹಾಗೂ ಗುರುವನಹಳ್ಳಿ ಎರಡು ಊರಿನ ರೈತರಿಗೆ ಅನುಕೂಲವಾಗುತ್ತದೆ. ಆದರೆ ಪ್ರಭಾವಿ ವ್ಯಕ್ತಿಗಳ ಆಮೇಶಕ್ಕೆ ಒಳಗಾಗಿ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ನಟರಾಜು, ನರಸಿಂಹಯ್ಯ, ಕಂಬಯ್ಯ, ಜಯಪ್ರಕಾಶ್, ನರಸಿಂಹಮೂರ್ತಿ, ಗೋಪಾಲ್ ಕೃಷ್ಣಪ್ಪ, ಉದಯಕುಮಾರ್, ಮಹೇಶ್,ನಾರಾಯಣಪ್ಪ, ಶ್ರೀನಿವಾಸ , ಮುಂತಾದವರು ಭಾಗಿಯಾಗಿದ್ದರು.