ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಆಟದ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದರ ಪ್ರಕಾರ ಅಂಪೈರ್ಗಳು ಇನ್ನು ಮುಂದೆ ತೀರ್ಪು ಮರುಪರಿಶೀಲನೆ ವ್ಯವಸ್ಥೆ (ಡಿಆರ್ಎಸ್) ಸಮಯದಲ್ಲಿ ಸ್ಟಂಪಿಂಗ್ ಮನವಿ ಮಾಡಿದಲ್ಲಿ ಸೈಡ್-ಆನ್ ಕ್ಯಾಮೆರಾದ ರಿಪ್ಲೇಗಳನ್ನು ಮಾತ್ರ ನಿರ್ಣಯಿಸಿ ತೀರ್ಪು ನೀಡುತ್ತಾರೆ.
ಈ ಮಾರ್ಪಾಡು 2023ರ ಡಿಸೆಂಬರ್ 12 ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ ಸ್ಟಂಪಿಂಗ್ಗೆ ತಂಡ ಮನವಿ ಮಾಡಿದಲ್ಲಿ ಅಂಪೈರ್ಗಳು ಚೆಂಡು ಬ್ಯಾಟಿಗೆ ತಗುಲಿದೆಯೇ (ಸ್ನಿಕ್) ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ತಂಡವೊಂದು ವಿಕೆಟ್ ಕೀಪರ್ಗೆ ಕ್ಯಾಚ್ ಮನವಿ ಮಾಡಿದಲ್ಲಿ ಆಗ ಪ್ರತ್ಯೇಕವಾಗಿ ಡಿಆರ್ಎಸ್ ಆಯ್ಕೆ ಬಳಸಬೇಕಾಗುತ್ತದೆ.
ಕಳೆದ ವರ್ಷದ ಆರಂಭದಲ್ಲಿ ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ, ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸ್ಟಂಪಿಂಗ್ ನಂತರ ತೀರ್ಪು ಪರಿಶೀಲನೆಗೆ ಮನವಿ ಮಾಡಿ ಕಾಟ್ ಬಿಹೈಂಡ್ (ಕೀಪರ್ಗೆ ಕ್ಯಾಚ್) ಪರಿಶೀಲನೆ ಅವಕಾಶ ಪಡೆಯುತ್ತಿದ್ದರು. ಇದರಿಂದ (ಆಸ್ಟ್ರೇಲಿಯಾ) ತಂಡದ ಡಿಆರ್ಎಸ್ ಆಯ್ಕೆ ಉಳಿಯುತಿತ್ತು.
ಡಿಆರ್ಎಸ್ ದುರ್ಲಾಭ ತಡೆಯುವುದು ನಿಯಮ ಬದಲಾವಣೆಯ ಉದ್ದೇಶವಾಗಿದೆ. ಕಂಕಷನ್ಗೆ ವೇಳೆ, ಅದಕ್ಕೆ ಒಳಗಾದ ಆಟಗಾರ ಬೌಲಿಂಗ್ ಮಾಡಲಾಗದಿದ್ದರೆ, ಬದಲಿಯಾಗಿ ಬರುವ ಆಟಗಾರನಿಗೂ ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ.ಮೈದಾನದಲ್ಲಿ ಗಾಯದ ತೀವ್ರತೆ ತಿಳಿಯಲು ಮತ್ತು ಚಿಕಿತ್ಸೆಗೆ ಇರುವ ಒಟ್ಟು ಅವಧಿಯನ್ನು ಐಸಿಸಿ ನಾಲ್ಕು ನಿಮಿಷಗಳಿಗೆ ಸೀಮಿತಗೊಳಿಸಿದೆ.