ಹೈದರಾಬಾದ್: ರಾಮ್ ಗೋಪಾಲ್ ವರ್ಮಾ ಅವರು ಸದಾ ವಿವಾದದ ಮೂಲಕ ಸುದ್ದಿ ಆಗುತ್ತಾ ಇರುತ್ತಾರೆ. ಹಲವು ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಈಗ ಆರ್ಜಿವಿ ಅವರು ದರ್ಶನ್ ಕೇಸ್ ಬಗ್ಗೆ ಮಾತನಾಡಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಅವರು, `ನಿರ್ದೇಶಕರು ಚಿತ್ರಕಥೆ ಬರೆದ ಬಳಿಕವೇ ಸಿನಿಮಾದ ಶೂಟಿಂಗ್ ಆರಂಭಿಸುತ್ತಾರೆ. ಹಲವು ಸಂದರ್ಭದಲ್ಲಿ ನಿರ್ದೇಶಕರು ಸೆಟ್ನಲ್ಲೂ ಚಿತ್ರಕಥೆ ಬರೆಯುತ್ತಾರೆ. ಆದರೆ, ದರ್ಶನ್ ಪ್ರಕರಣದಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ ಚಿತ್ರಕಥೆ ಬರೆಯಲಾಗುತ್ತಿದೆ’ ಎಂದಿದ್ದಾರೆ. ದರ್ಶನ್ ಅವರು ಕೊಲೆ ಕೇಸ್ನಲ್ಲಿ ಭಾಗಿ ಆಗಿದ್ದು, ಇದರಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಥೆ ಹೇಳುತ್ತಿದ್ದಾರೆ ಎಂಬರ್ಥದಲ್ಲಿ ಆರ್ಜಿವಿ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿ. ಅವರ ಮೇಲೆ ಹಲ್ಲೆ ಮಾಡಿದ್ದು ದರ್ಶನ್ ಹಾಗೂ ಅವರ ಆಪ್ತರು. `ವೈಯಕ್ತಿಕ ಜೀವನದಲ್ಲಿ ಮಧ್ಯಪ್ರವೇಶಿಸುತ್ತಿರುವ ಅಭಿಮಾನಿಯನ್ನು ಕೊಲ್ಲಲು ಸ್ಟಾರ್ ನಟ ಡೈ ಹಾರ್ಡ್ ಅಭಿಮಾನಿಗಳನ್ನೇ ಬಳಿಸಿಕೊಂಡಿದ್ದಾರೆ. ಇದು ಸ್ಟಾರ್ ಹೀರೋಗಳ ಆರಾಧನಾ ಸಂಸ್ಕೃತಿಯ ವಿಲಕ್ಷಣತೆಗೆ ಸೂಕ್ತ ಉದಾಹರಣೆಯಾಗಿದೆ. ತಾವು ಆರಾಧಿಸುವ ನಟ ಹೀಗೆಯೇ ಇರಬೇಕು ಎಂದು ಬಯಸುತ್ತಾ ಹೋದಾಗ ಆಗುವ ಅಡ್ಡಪರಿಣಾಮಗಳು ಇವು’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ದರ್ಶನ್ ಫ್ಯಾಮಿಲಿ ಮ್ಯಾನ್ ಆಗಿರಬೇಕು ಎಂದು ರೇಣುಕಾಸ್ವಾಮಿ ಬಯಸಿದ್ದರು. ಅವರು ಪವಿತ್ರಾ ಬದಲು ವಿಜಯಲಕ್ಷ್ಮಿ ಜೊತೆ ಇರಲಿ ಎಂದು ರೇಣುಕಾ ಸ್ವಾಮಿ ಅಂದುಕೊಂಡಿದ್ದರು. ಈ ಕಾರಣಕ್ಕೆ ಪವಿತ್ರಾಗೆ ಅವರು ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು. ಇದರಿಂದ ಅವರ ಪ್ರಾಣವೇ ಹೋಗಿದೆ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.