ಭಾರತದ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಆಘಾತಕಾರಿಯಾಗಿ ಸೋಲನ್ನಪ್ಪಿದ ಬಳಿಕ ಪಾಕಿಸ್ತಾನ ಕ್ರಿಕೆಟಿಗ ನಸೀಂ ಶಾ ಅತ್ತೇಬಿಟ್ಟಿದ್ದರು. ಆದರೆ ಅಳುತ್ತಿದ್ದ ನಸೀಂ ಶಾ ಬಳಿ ಬಂದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಮಾಧಾನಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತದ ವಿರುದ್ಧ ಪಾಕಿಸ್ತಾನ 119 ರನ್ ಗಳನ್ನು ಚೇಸ್ ಮಾಡಲಾಗದೇ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಕೇವಲ 6 ರನ್ ಗಳಿಂದ ಪಂದ್ಯ ಸೋತಿತ್ತು. ಮುಂದಿನ ಹಂತಕ್ಕೆ ತೇರ್ಗಡೆಯಾಗುವ ನಿಟ್ಟಿನಿಂದ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.
ಆದರೆ ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ಹೋರಾಟಕ್ಕೆ ಮಣಿದ ಪಾಕ್ ಕೂದಲೆಳೆಯಲ್ಲಿ ಸೋತಿತು. ಹೀಗಾಗಿ ಕೊನೆಯ ಕ್ಷಣದಲ್ಲಿ ಕ್ರೀಸ್ ನಲ್ಲಿದ್ದ ನಸೀಂ ಶಾ ಕಣ್ಣೀರಾದರು. ಪಂದ್ಯ ಮುಗಿದ ಬಳಿಕ ಅವರು ಕಣ್ಣೀರೊರೆಸುತ್ತಲೇ ಕ್ರೀಸ್ ಬಿಡುತ್ತಿರುವಾಗ ಬಳಿ ಬಂದ ರೋಹಿತ್ ಅವರ ಕೈ ಕುಲುಕಿದ್ದಲ್ಲದೆ, ಬೆನ್ನು ತಟ್ಟಿ ಸಮಾಧಾನಿಸಿದರು.