ಇಂಡಿಯನ್ ಪ್ರೀಮಿಯರ್ ಲೀಗ್ ನ 2026ರ ಸೀಸನ್ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅಗ್ನಿಪರೀಕ್ಷೆಯಾಗಲಿದೆಯೇ?ಇವರಿಬ್ಬರು ಆಡುವ ಪ್ರತಿಯೊಂದು ಟೂರ್ನಿ ಬಂದಾಗಲೂ ಈ ಪ್ರಶ್ನೆ ಏಳುತ್ತಲೇ ಇದೆ.ಇದೀಗ ಐಪಿಎಲ್ ಪ್ರಾರಂಭಕ್ಕೂ ಮುನ್ನ ಸಹ ಈ ಪ್ರಶ್ನೆ ಮತ್ತೆ ಎದ್ದಿದೆ. ಭಾರತ ತಂಡದ ಈಗಿನ ಪರಿಸ್ಥಿತಿ ಮತ್ತು ಆಯ್ಕೆದಾರರ ಮನಸ್ಥಿತಿಯನ್ನು ಗಮನಿಸಿದಾಗ ಈ ಪ್ರಶ್ನೆ ಏಳುವುದು ಸಹಜವೂ ಹೌದು. ಅದಕ್ಕೆ ಮುಖ್ಯವಾದ ಕಾರಣ ಅವರಿಬ್ಬರ ವಯಸ್ಸು.
ಸಚಿನ್ ತೆಂಡೂಲ್ಕರ್ ಬಳಿಕ ಭಾರತ ಕಂಡ ಸರ್ವಶ್ರೇಷ್ಠ ಆಟಗಾರನೆಂದೇ ಜನಪ್ರಿಯವಾಗಿರುವ ವಿರಾಟ್ ಕೊಹ್ಲಿಗೆ ಇದೀಗ 37 ವರ್ಷ. 2027ರ ಏಕದಿನ ವಿಶ್ವಕಪ್ ಆಡುವ ವೇಳೆ ಅವರಿಗೆ ವಯಸ್ಸು 39 ಆಗಿರುತ್ತದೆ. ಇನ್ನು ರೋಹಿತ್ ಶರ್ಮಾ ಅವರಿಗೆ ಇದೀಗ 38 ವರ್ಷವಾಗಿದ್ದು ಏಪ್ರಿಲ್ 30 ಅಂದರೆ ಈ ಐಪಿಎಲ್ ಸೀಸನ್ ಮುಗಿಯುವುದರೊಳಗಾಗಿ 39 ವರ್ಷವಾಗಲಿದೆ. ಅಂದರೆ ಮುಂದಿನ ವರ್ಷ ಏಕದಿನ ವಿಶ್ವಕಪ್ ಆಡುವ ವೇಳೆ 40 ವರ್ಷ ದಾಟಿರುತ್ತದೆ! ವಯಸ್ಸೊಂದೇ ಪ್ರದರ್ಶನದ ಮಾನದಂಡ ಅಲ್ಲ ಎಂಬ ಮಾತನ್ನು ಪಕ್ಕಕ್ಕಿರಿಸಿದರೂ ಫಾರ್ಮ್, ಫಿಟ್ನೆಸ್, ಉತ್ಸಾಹ, ಮಾನಸಿಕ ಒತ್ತಡವನ್ನು ನಿಭಾಯಿಸುವ ಶಕ್ತಿ ಎಲ್ಲವೂ ರಾಷ್ಟ್ರೀಯ ತಂಡದ ಆಯ್ಕೆಗೆ ಮಾನದಂಡವಾಗುತ್ತದೆ.
ರೋಹಿತ್ ಶರ್ಮಾ ಕಳೆದ ಕೆಲವು ವರ್ಷಗಳಿಂದ ಐಪಿಎಲ್ ನಲ್ಲಿ ಅಷ್ಟಾಗಿ ಸ್ಥಿರ ಪ್ರದರ್ಶನ ತೋರಿಲ್ಲ. ತಮ್ಮ ಹಳೇ ಫಾರ್ಮಿಗೆ ಮರಳಲು ಅವರಿಗೆ ಇದೊಂದು ಉತ್ತಮ ಅವಕಾಶ. ವೈಯಕ್ತಿಕವಾಗಿ ಅವರು ಈ ಸೀಸನ್ ಅನ್ನು ಆನಂದಿಸಲಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ಗಾಗಿ ಕೆಲವು ಅದ್ಭುತ ಕೆಲಸಗಳನ್ನು ಮಾಡಲಿದ್ದಾರೆ ಎಂಬುದು ನನ್ನ ಭಾವನೆಯಾಗಿದೆ.
ಆಸ್ಟೆçÃಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಳಲ್ಲಿ ಇವರಿಬ್ಬರ ಬ್ಯಾಟಿಂಗ್ ಉನ್ನತ ಮಟ್ಟದಲ್ಲಿತ್ತು. ವಿರಾಟ್ ಕೊಹ್ಲಿ ಅವರ ಫೀಲ್ಡಿಂಗ್ ಬಗ್ಗೆಯೂ ಚಕಾರ ಎತ್ತುವಂತಿಲ್ಲ. ಇಬ್ಬರೂ ಮ್ಯಾಚ್ ವಿನ್ನರ್ ಗಳಾಗಿದ್ದರು. ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ದೇಶೀಯ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ವಿಶ್ವಕಪ್ ನಡೆಯಲು ಇನ್ನೂ ಹೆಚ್ಚೂಕಡಿಮೆ ಒಂದೂವರೆ ವರ್ಷ ಇದೆ. ಈ ಇಬ್ಬರು ಆಟಗಾರರು ಇದೇ ಉತ್ಸಾಹ, ಫಾರ್ಮ್, ಫಿಟ್ನೆಸ ಅನ್ನು ಆಗಲೂ ಉಳಿಸಿಕೊಳ್ಳುತ್ತಾರಾ ಎಂಬುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ರಾಷ್ಟ್ರೀಯ ತಂಡದಲ್ಲಿ ಈ ಇಬ್ಬರು ಆಟಗಾರರು ಚೆನ್ನಾಗಿ ಆಡುತ್ತಿರುವುದರಿಂದ ಇವರಿಬ್ಬರ ಸ್ಥಾನದಲ್ಲಿ ಬೇರೆಯವರನ್ನು ಆಡಿಸುವ ಧೈರ್ಯವನ್ನು ಬಿಸಿಸಿಐ ಮಾಡಿಲ್ಲ. ಇಲ್ಲವಾದಲ್ಲಿ ಹೊಸ ತಂಡ ಕಟ್ಟುವ ಉತ್ಸಾಹದಲ್ಲಿರುವ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಪ್ರಧಾನ ಕೋಚ್ ಗೌತಮ್ ಗಂಭೀರ್ ಇಬ್ಬರೂ ಸೇರಿ ಇವರಿಬ್ಬರನ್ನು ಹೊರಗಿರಿಸಲು ಏನಾದರೊಂದು ದಾರಿ ಕಂಡುಹುಡುಕುತ್ತಿದ್ದರು.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗಿದು ಅಗ್ನಿ ಪರೀಕ್ಷೆ



