ಅಕ್ಟೋಬರ್ ೧೯ ರಿಂದ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಸ್ಥಾನ ಕಲ್ಪಿಸಲಾಗಿದೆ. ಹಾಗೆಂದು ಇಬ್ಬರು ಹಿರಿಯ ಆಟಗಾರರ ಕ್ರಿಕೆಟ್ ಭವಿಷ್ಯ ಸುಸೂತ್ರವಾಗಿದೆ ಎಂದರ್ಥವಲ್ಲ. ಇನ್ನು ಅವರು ತಂಡ ಮತ್ತು
ದೇಶೀಯ ಕ್ರಿಕೆಟ್ ನಲ್ಲಿ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂಬ ಸ್ಪಷ್ಟ ಸೂಚನೆ ಅಜಿತ್ ಅಗರ್ಕರ್ ಮಾತಿನಲ್ಲಿ ಇದ್ದವು.
ರೋಹಿತ್ ಶರ್ಮ ಅವರ ಬದಲಿಗೆ ಶುಭಮನ್ ಗಿಲ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದ ಬಳಿಕ ಭವಿಷ್ಯದಲ್ಲೂ ಅನೇಕ ಬದಲಾವಣೆಗಳು ನಡೆಯುವುದು ಖಚಿತ ಎಂದು ಹೇಳಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರಿಗೆ ಸುದ್ದಿಗಾರರು ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರ ಆಯ್ಕೆಗೆ ವಿಜಯ್ ಹಜಾರೆ ಟ್ರೋಫಿ ಆಡಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಗರ್ಕರ್, “ಆಟಗಾರರು ಲಭ್ಯವಿದ್ದಾಗಲೆಲ್ಲಾ, ಅವರು ದೇಶೀಯ ಕ್ರಿಕೆಟ್ ಆಡಬೇಕು ಎಂದು ನಾವು ಸ್ಪಷ್ಟಪಡಿಸಿದ್ದೇವೆ” ಎಂದು ತಿಳಿಸಿಜರು. ಅಂದರೆ ಇನ್ನುಮುಂದೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಆಯ್ಕೆ ಕೇವಲ ಅವರ ಪ್ರದರ್ಶನ ಮತ್ತು ಅರ್ಹತೆಯ ಆಧಾರದ ಮೇಲೆ ಇರುತ್ತದೆ ಎಂದು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಜನವರಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ನಂತರ, BCCI ಒಂದು ೧೦-ಸೂತ್ರಗಳ ಆದೇಶವನ್ನು ಹೊರಡಿಸಿತ್ತು. ಆ ಆದೇಶದಲ್ಲಿ, ಲಭ್ಯವಿರುವ ಪ್ರತಿಯೊಬ್ಬ ಆಟಗಾರನಿಗೂ ದೇಶೀಯ ಕ್ರಿಕೆಟ್ ಆಡುವುದು ಕಡ್ಡಾಯ ಎಂಬ ಪ್ರಮುಖ ಅಂಶವೂ ಸೇರಿತ್ತು. ಈ ನಿಯಮವನ್ನು
ಎಲ್ಲರೂ ಪಾಲಿಸಬೇಕು ಎಂದು ಆಗಲೇ ಸ್ಪಷ್ಟಪಡಿಸಲಾಗಿತ್ತು. ವೈಟ್ ಬಾಲ್ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ
ಅತ್ಯುತ್ಕೃಷ್ಟ ಮಟ್ಟದಲ್ಲಿದ್ದರೂ ಕಳೆದ ವರ್ಷ ನಡೆದ ಟೆಸ್ಟ್ ಸರಣಿಗಳಲ್ಲಿ ಭಾರತ ತಂಡ ದಯನೀಯ ವೈಫಲ್ಯ ಅನುಭವಿಸಿತ್ತು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ೩-೦ ವೈಟ್ ವಾಶ್ ಮುಖಭಂಗ ಅನುಭ ವಿಸಿದ್ದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ೩-೧ ಅಂತರದಿAದ ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ ಪ್ರಧಾನ ಕೋಚ್ ಗೌತಮ್ ಗಂಭೀರ್ ಜೊತೆ ಮಾತುಕತೆ ನಡೆಸಿದ್ದ ಬಿಸಿಸಿಐ
ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು.
ಈ ವೇಳೆಗಾಗಲೇ ಇವರಿಬ್ಬರು ಹಿರಿಯ ಕ್ರಿಕೆಟಿಗರ ವಿರುದ್ಧ ಅಪಸ್ವರಗಳು ಕೇಳಿ ಬಂದಿದ್ದವು. ಇಬ್ಬರೂ ದೇಶೀಯ ಕ್ರಿಕೆಟ್ ನಲ್ಲಿ ಆಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿ ಎಂಬ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಅನಿಲ್ ಕುಂಬ್ಳೆ ಸೇರಿದಂತೆ ಅನೇಕ ಮಂದಿ ವ್ಯಕ್ತಪಡಿಸಿದ್ದರು. ಬಿಸಿಸಿಐ ಸಹ ಈ ಸಂಗತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ಸೂಚನೆ ನೀಡಿದ್ದರಿಂದ ದಶಕದ ಬಳಿಕ ಇಬ್ಬರೂ ರಣಜಿ ಟ್ರೋಫಿ ಪಂದ್ಯಗಳಲ್ಲಿ ದಿಲ್ಲಿ ಮತ್ತು ಮುಂಬೈ ಪರ ಮೈದಾನಗಳಲ್ಲಿಕಾಣಿಸಿಕೊಂಡಿದ್ದರು.