ತಿ.ನರಸೀಪುರ: ಸಾರ್ವಜನಿಕ ಶಾಂತಿ ಮತ್ತು ಸಮಾಜದ ನೆಮ್ಮದಿಗೆ ಧಕ್ಕೆ ಉಂಟು ಮಾಡುವ ವರ್ತನೆ ಮುಂದುವರಿಸುತ್ತಿದ್ದಾ ನೆಂಬ ಕಾರಣದ ಮೇರೆಗೆ, ಮಣಿ @ ಮಣಿಕಂಠರಾಜಗೌಡ (೪೫),(ವೃತ್ತಿ ಚಾಲಕ) ಹೊಸ ತಿರುಮಕೂಡಲು ಗ್ರಾಮದ ನಿವಾಸಿಯನ್ನು ಮೈಸೂರು ಜಿಲ್ಲೆಯಿಂದ ಆರು ತಿಂಗಳ ಕಾಲ ಗಡಿಪಾರು ಮಾಡುವ ಆದೇಶವನ್ನು ಮೈಸೂರು ಉಪ ವಿಭಾಗಾಧಿಕಾರಿ ಹಾಗೂ ಉಪವಿಭಾಗ ದಂಡಾಧಿಕಾರಿ ಆಶಪ್ಪ ಅವರು ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಅಧಿನಿಯಮ ೧೯೬೩ರ ನಿಯಮ ೫೫ ಮತ್ತು ೫೬ರ ಅಡಿಯಲ್ಲಿ ಜಾರಿಗೊಂಡ ಈ ಆದೇಶದಲ್ಲಿ, ಆರೋಪಿಯು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ, ಶಾಂತಿಭಂಗ ಉಂಟುಮಾಡುವ, ಸಮಾಜದ ಸ್ವಾಸ್ಥ್ಯಕ್ಕೆ ಅಪಾಯವಾಗು ವಂತಹ ಚಟುವಟಿಕೆಗಳಲ್ಲಿ ತೊಡಗಿ ಕೊಂಡಿರುವುದರಿಂದ ಗಡಿಪಾರು ಕ್ರಮ ಅನಿವಾರ್ಯವಾಯಿತು ಎಂದು ವಿವರಿಸಲಾಗಿದೆ. ಆದೇಶವು ತಕ್ಷಣದಿಂದ ಜಾರಿಯಾಗಿ ೨೦೨೬ರ ಏಪ್ರಿಲ್ ೧೯ರವರೆಗೆ ಮಾನ್ಯವಾಗಿರಲಿದೆ.
ಸಿಂಧನೂರಿಗೆ ಗಡಿಪಾರು: ನಿತ್ಯ ಹಾಜರಾತಿ ನಿಗದಿ; ಗಡಿಪಾರು ಆದೇಶದಂತೆ ಮಣಿಕಂಠರಾಜ ಗೌಡರನ್ನು ರಾಯಚೂರು ಜಿಲ್ಲೆಯ ಸಿಂಧನೂರು ಉಪವಿಭಾಗದ ಬಳಗಾನೂರು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಾಜರಾತಿ ನೀಡಬೇಕಿದ್ದು, ಸಂಬಂಧಿತ ಠಾಣೆಗೆ ಪೊಲೀಸ್ ಇಲಾಖೆಯ ಮೂಲಕ ರವಾನಿಸುವ ಕಾರ್ಯ ನಡೆಯಿತು. ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದ ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರು, `ಸಾರ್ವಜನಿಕ ಶಾಂತಿ ಕದಡುವವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಕರ್ತವ್ಯ, ಗಡಿಪಾರು ಅವಧಿಯಲ್ಲಿ ಆರೋಪಿಯನ್ನು ಮೈಸೂರು ಜಿಲ್ಲೆಯ ಎಲ್ಲೆಂದರಲ್ಲಿ ಕಂಡರೂ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.
ರೌಡಿಶೀಟರ್ ಆಗಿರುವ ಆರೋಪಿಯ ವಿರುದ್ಧ ಗಟ್ಟಿಯಾದ ದಾಖಲೆಗಳು: ನಂಜನಗೂಡು ಉಪವಿಭಾಗದ ಡಿವೈಎಸ್ಪಿ ಅವರ ವರದಿ ಆಧರಿಸಿ, ನರಸೀಪುರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿ ಇದ್ದ ಮಣಿಕಂಠರಾಜಗೌಡ ನಂತಹ ವ್ಯಕ್ತಿಯ ಚಟುವಟಿಕೆಗಳು ಸಮಾಜ ಸೇವೆ ಎಂಬ ಹೆಸರುಗಳ ಹಿಂದೆ ವಸೂಲಿ, ಬೆದರಿಕೆ, ಕಾನೂನು ಬಾಹಿರ ಚಟುವಟಿಕೆ ಗಳು ನಡೆದಿರುವುದನ್ನು ಪೊಲೀಸರು ದಾಖಲೆಗಳೊಂದಿಗೆ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ೬ ತಿಂಗಳ ಗಡಿಪಾರು ಆದೇಶ ಹೊರಡಿಸಿದ್ದು, ಇದು ಕಾನೂನು ಬಾಹಿರವಾಗಿ ಪೊಲೀಸರು ಮತ್ತು ಅಧಿಕಾರಿಗಳ ಮೇಲೆಯೇ ಒತ್ತಡ ಹೇರುವವರಿಗೂ `ಎಚ್ಚರಿಕೆಯ ಗಂಟೆ’ ಎಂದರು. ಕಬಿನಿ ಅತಿಥಿಗೃಹದಿಂದ ವಶಕ್ಕೆ- ಕಾನೂನು ರೀತಿ ಗಡಿಪಾರು; ಗಡಿಪಾರು ಆದೇಶ ಬಂದ ತಕ್ಷಣವೇ, ಪಟ್ಟಣದ ಕಬಿನಿ ಅತಿಥಿಗೃಹದಲ್ಲಿ ದಲಿತ ಸಂಘಟನೆ ಮುಖಂಡರೊಬ್ಬರೊಂದಿಗೆ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು
ವಶಕ್ಕೆ ಪಡೆದರು. ಬಳಿಕ ಕಾನೂನು ಪ್ರಕ್ರಿಯೆ ನಪೂರ್ಣಗೊಳಿಸಿ, ಸಬ್ ಇನ್ಸ್ಪೆಕ್ಟರ್ ಜಗದೀಶ್ ದೂಳ್ ಶೆಟ್ಟಿ ಹಾಗೂ ಸಿಬ್ಬಂದಿ ಆರೋಪಿಯನ್ನು ಸಿಂಧನೂರು ಉಪವಿಭಾಗದ ಬಳಗಾನೂರುಪೊಲೀಸ್ ಠಾಣೆಗೆಕರೆದುಕೊಂಡು ಹೋಗಿ ಹಸ್ತಾಂತರಿಸಲಿದ್ದಾರೆ ಎಂದರು.
ಪೊಲೀಸರ ಎಚ್ಚರಿಕೆ: `ಸಾರ್ವಜನಿಕರು ಹೆದರಬೇಡಿ `ದೂರುನೀಡಿ’ ಮಣಿಕಂಠ್ ರಾಜ್ ಗೌಡನ ಚಟುವಟಿಕೆ ಗಳಿಂದ ನರಸೀಪುರದ ಜನತೆಗೆ ಉಂಟಾಗಿದ್ದ ಭಯಕ್ಕೆ ತೆರೆ ಬಿದ್ದಿದೆ ಈತ ಯಾರ ಮೇಲಾದರೂ ದೌರ್ಜನ್ಯ ನಡೆಸಿದ್ದರೆ ಭಯವಿಲ್ಲದೆ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇಂತಹವರಿಗೆ ಕಾನೂನು ಪಾಠ ಕಲಿಸುವುದು ಪೊಲೀಸ್ ಇಲಾಖೆಯ
ಜವಾಬ್ದಾರಿ, ಕಾನೂನು ಮೇಲೆಯೇ ಸವಾರಿ ಮಾಡಲು ಯತ್ನಿಸುವವರಿಗೆ ಈ ಕ್ರಮ ಸ್ಪಷ್ಟ ಸಂದೇಶ ಆಗಿದೆ ಎಂದು ಅವರು ಹೇಳಿದರು.



