ಕನಕಪುರ: ದೇಶೀಯ ಕ್ರೀಡೆಗಳಾದ ಕಬ್ಬಡಿ, ಕೊಕೊ, ಎತ್ತಿನಬಂಡಿ, ವಾಲಿಬಾಲ್, ಕುಸ್ತಿಯಂತಹ ಕ್ರೀಡೆಗಳಿಗೆ ಉತೇಜನ ನೀಡುವುದರಿಂದ ಗ್ರಾಮೀಣ ಕ್ರೀಡೆಗಳಿಗೆ ಬೆಲೆ ದೊರೆತಂತಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ತಿಳಿಸಿದರು.
ಗುರುವಾರ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತಿರುವುದರಿಂದ ಅವುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಗ್ರಾಮೀಣ ಪ್ರದೇಶಗಳ ಮೂಲಕ ವಯೋಮಿತಿಯಿಲ್ಲದೆ ಎಲ್ಲರು ಈ ಕ್ರೀಡೆಯಲ್ಲಿ ಭಾಗಿಯಾಗಿ ಗ್ರಾಮೀಣ ಕ್ರೀಡೆಗಳನ್ನು ಬೆಳೆಸಬೇಕು ಎಂದರು.
ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡಾ ಸಂಸ್ಕೃಂತಿಯನ್ನು ಉತ್ತೇಜಿಸಲು, ಸರ್ಕಾರ ಶೇ 2 ರಷ್ಟು ಅನುದಾನವನ್ನು ಗ್ರಾಮೀಣ ಕ್ರೀಡಾಕೂಟಕ್ಕೆ ನೀಡುತ್ತಿದೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸಿ ಅವುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಹೆಚ್ಚಾಗಿ ನಡೆಸಿ ಯಶಸ್ವಿ ಗೊಳಿಸುವಂತೆ ತಿಳಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಡಿ.ಎಸ್.ಸತೀಶ್ ಮಾತನಾಡಿ ಈ ಕ್ರೀಡಾಕೂಟದಲ್ಲಿ ವಿಜೇತರಾದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದು ಇಂತಹ ಕ್ರೀಡಾಕೂಟಗಳು ವ್ಯಕ್ತಿಯ ಸಮಗ್ರವಾದ ವಿಕಾಸನಕ್ಕೆ ಜಾರಿಯಾಗುವ ಜೊತೆಗೆ ಪರಸ್ಪರ ಮಧುರ ಬಾಂಧವ್ಯಕ್ಕೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಈ ಕ್ರೀಡಾಕೂಟದಲ್ಲಿ ಕಬ್ಬಡಿ ಸ್ಪರ್ಧೆಗೆ 18 ವರ್ಷದಿಂದ, ವಾಲಿಬಾಲ್ 15 ವರ್ಷ ಹಾಗೂ ಕೊಕೊ ಆಟಕ್ಕೆ 20 ವರ್ಷದ ವಯೋಮಿತಿಯವರು ಭಾಗಿಯಾಗಿದ್ದು ಓಟ್ಟು 50 ತಂಡಗಳು ಸ್ಪರ್ಧೆಯಲ್ಲಿ ಭಾಗಿಯಾಗಿವೆ, ಗೆದ್ದ 9 ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕ್ರೀಡಾಕೂಟದಲ್ಲಿ ತಾಲ್ಲೂಕು ಶಿಕ್ಷಣಾಧಿಕಾರಿ ರಾಮಪ್ಪ, ತಾಲ್ಲೂಕು ದೈಹಿಕ ಶಿಕ್ಷಕರು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಹಾಗೂ ಕ್ರೀಡಾಪಟು ಗಳು ಭಾಗವಹಿಸಿದ್ದರು.