“ಸಂಕಲ್ಪ ಎನ್ನುವುದು ಬೀಜವಾದರೆ, ಸಂಸ್ಕಾರ ಎನ್ನುವುದು ಆ ಬೀಜಕ್ಕೆ ನಾವು ನೀಡುವ ಗೊಬ್ಬರ ಮತ್ತು ನೀರು. ಈ ಎರಡೂ ಮೇಳೈಸಿದಾಗ ಮಾತ್ರ ಭಗವಂತನ ದರ್ಶನ ಎಂಬ ಫಲ ಸಿಗಲು ಸಾಧ್ಯ.” ಈ ಸತ್ಯಕ್ಕೆ ಅತ್ಯುತ್ತಮ ನಿದರ್ಶನ ಮಾತೆ ಶಬರಿ. ಶಬರಿ ಎನ್ನುವುದು ಕೇವಲ ಒಂದು ಹೆಸರಲ್ಲ, ಅದು ಹಸಿವಿನಿಂದ ಬಳಲುವ ಆತ್ಮಕ್ಕೆ ಉಣಬಡಿಸುವ ‘ಆಧ್ಯಾತ್ಮಿಕ ಚರು’.
ಜನ್ಮ ಮತ್ತು ಸಂಸ್ಕಾರದ ಉದಯ; ಶಬರಿ ಹುಟ್ಟಿದ್ದು ಬೇಡರ ಕುಲದಲ್ಲಿ. ಲೌಕಿಕ ಜಗತ್ತು ಆಕೆಯನ್ನು ಕೀಳು ಎಂದು ನೋಡಿದರೂ, ಆಕೆಯ ಒಳಗಿದ್ದ ‘ಸಂಕಲ್ಪ’ ಉನ್ನತವಾಗಿತ್ತು. ಮದುವೆಯ ನೆಪದಲ್ಲಿ ನಡೆಯಬೇಕಿದ್ದ ನೂರಾರು ಮೂಕ ಪ್ರಾಣಿಗಳ ಬಲಿಯನ್ನು ಕಂಡು ಆಕೆ ಮರುಗಿದಳು. “ನನ್ನ ವೈಯಕ್ತಿಕ ಸುಖಕ್ಕಾಗಿ ಪರಜೀವಿಗಳ ಹತ್ಯೆಯೇ?” ಎಂಬ ಪ್ರಶ್ನೆ ಆಕೆಯ ಅಂತರAಗದಲ್ಲಿ ಉದಯಿಸಿತು. ಈ ‘ಕಾರುಣ್ಯ’ವೇ ಆಕೆಯ ಜೀವನದ ಮೊದಲ ಸಂಸ್ಕಾರ. ಅರಮನೆಯ ಸುಖವನ್ನು ತೊರೆದು, ಅಹಿಂಸೆಯ ಹಾದಿ ಹಿಡಿದು ಆಕೆ ಕಾಡಿಗೆ ಬಂದಳು. ಇಲ್ಲಿ ಜನ್ಮಕ್ಕಿಂತ ಕರ್ಮದ ಸಂಸ್ಕಾರ ದೊಡ್ಡದು ಎಂಬ ಪಾಠ ನಮಗೆ ಸಿಗುತ್ತದೆ.
ಮಾತಂಗ ಮಹರ್ಷಿಗಳ ದೀಕ್ಷೆ ಮತ್ತು ಗುರು ಸಂಕಲ್ಪ
ಅನಾಥೆಯಾಗಿ ಅಲೆಯುತ್ತಿದ್ದ ಶಬರಿಗೆ ಆಶ್ರಯ ನೀಡಿದ್ದು ನಮ್ಮ ಈ ಪೀಠಕ್ಕೆ ಮೂಲ ಪ್ರೇರಣೆಯಾದ ಮಾತಂಗ ಮಹರ್ಷಿಗಳು. ಮಹರ್ಷಿಗಳು ಆಕೆಗೆ ಕೇವಲ ಆಶ್ರಯ ನೀಡಲಿಲ್ಲ, ಆಕೆಯ ಆತ್ಮಕ್ಕೆ ‘ಗುರು ಸಂಕಲ್ಪ’ದ ದೀಕ್ಷೆ ನೀಡಿದರು. “ಮಗಳೇ, ನಿನ್ನ ಭಕ್ತಿಗೆ ಮೆಚ್ಚಿ ಸಾಕ್ಷಾತ್ ಪರಬ್ರಹ್ಮನೇ ರಾಮನ ರೂಪದಲ್ಲಿ ನಿನ್ನನ್ನರಸಿ ಬರುತ್ತಾನೆ” ಎಂದು ದೀವಿಗೆ ನೀಡಿದರು. ಗುರುಗಳ ವಾಕ್ಯದ ಮೇಲೆ ನಂಬಿಕೆ ಇಟ್ಟು ದಶಕಗಳ ಕಾಲ ಕಾಡುಮೇಡುಗಳಲ್ಲಿ ರಾಮನಿಗಾಗಿ ಕಾಯುವುದು ಶಬರಿಯ ‘ಅಚಲ ಸಂಕಲ್ಪ’ವಾಗಿತ್ತು.
ನಮ್ಮ ಮಾತಂಗ ಸಂಸ್ಕಾರ ಗುರುಪೀಠವು ಸಾರುವುದೂ ಇದನ್ನೇ”ಗುರುವಿನ ಮೇಲಿನ ನಂಬಿಕೆ ಮತ್ತು ಸಂಕಲ್ಪದ ಶಕ್ತಿ ಇದ್ದರೆ, ಭಗವಂತನು ನಿಮ್ಮ ಮನೆ ಬಾಗಿಲಿಗೆ ಬರಲೇಬೇಕು.”
ಶಿಷ್ಟತೆ ಮತ್ತು ಸಮರ್ಪಣಾ ಭಾವ
ಶಬರಿಯ ಶಿಷ್ಟತೆ ಬಹಳ ವಿಶಿಷ್ಟವಾದುದು. ಆಕೆ ರಾಮನಿಗಾಗಿ ಹಣ್ಣುಗಳನ್ನು ಆರಿಸುವಾಗ ಪ್ರತಿಯೊಂದನ್ನೂ ಕಚ್ಚಿ ರುಚಿ ನೋಡುತ್ತಿದ್ದಳು. ಲೋಕಕ್ಕೆ ಅದು ಎಂಜಲು, ಆದರೆ ಆಧ್ಯಾತ್ಮಿಕವಾಗಿ ಅದು ‘ಪರೀಕ್ಷಿತ ಸಮರ್ಪಣೆ’. ನನ್ನ ದೇವರಿಗೆ ನೀಡುವ ಹಣ್ಣು ಹುಳಿಯಾಗಿರಬಾರದು ಎಂಬ ಕಾಳಜಿಯೇ ಶಬರಿಯ ಶಿಷ್ಟತೆ. ಭಗವಂತನಿಗೆ ನಾವು ಏನನ್ನು ನೀಡುತ್ತೇವೆ ಎಂಬುದು ಮುಖ್ಯವಲ್ಲ, ಯಾವ ಭಾವದಿಂದ ನೀಡುತ್ತೇವೆ ಎಂಬುದು ಮುಖ್ಯ. ಆಕೆಯ ಆ ‘ಎಂಜಲು’ ಹಣ್ಣುಗಳಲ್ಲಿದ್ದ ಪ್ರೀತಿ, ದೊಡ್ಡ ಯಜ್ಞಗಳಲ್ಲಿ ನೀಡುವ ಹವಿಸ್ಸಿಗಿಂತಲೂ ಮಿಗಿಲಾದದ್ದು.
ತ್ರೇತಾಯುಗದಿಂದ ಕಲಿಯುಗಕ್ಕೆ ಭಕ್ತಿಯ ಪಯಣ; ಶಬರಿ ರಾಮನನ್ನು ಭೇಟಿಯಾದದ್ದು ಕರ್ನಾಟಕದ ಹಂಪಿಯ ಪಂಪಾ ತೀರದಲ್ಲಿ. ಆದರೆ ಆಕೆಯ ಚೈತನ್ಯವು ಅಲ್ಲಿಗೇ ನಿಲ್ಲಲಿಲ್ಲ. ರಾಮನ ಅನುಗ್ರಹದಿಂದ ಆಕೆ ದಿವ್ಯ ಚೈತನ್ಯ ಪಡೆದು, ಅಂತಿಮ ಮುಕ್ತಿಗಾಗಿ ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿದಳು. ಇಂದು ಕೇರಳದಲ್ಲಿರುವ ಪಂಪಾ ನದಿ ಮತ್ತು ಶಬರಿಮಲೆ ಆಕೆಯ ತಪಸ್ಸಿನ ದ್ವಿತೀಯ ಘಟ್ಟ.
ತ್ರೇತಾಯುಗದಲ್ಲಿ ರಾಮನನ್ನು ಕಾಯ್ದ ಶಬರಿ, ಕಲಿಯುಗದ ಆರಂಭದಲ್ಲಿ ಧರ್ಮಶಾಸ್ತನು ಮಣಿಕಂಠನಾಗಿ ಅವತರಿಸಿದಾಗ ಆತನ ಸಾನ್ನಿಧ್ಯಕ್ಕೆ ಸಾಕ್ಷಿಯಾದಳು.
ಅಯ್ಯಪ್ಪ ಸ್ವಾಮಿಯು ಆಕೆಯ ತಪಸ್ಸಿಗೆ ಬೆಲೆಕೊಟ್ಟು ಆ ಬೆಟ್ಟಕ್ಕೆ ‘ಶಬರಿಮಲೆ’ ಎಂದು ನಾಮಕರಣ ಮಾಡಿದನು.
ಇದು ಕಾಲಾತೀತ ಭಕ್ತಿಯ ಪಯಣ. ಒಬ್ಬ ಭಕ್ತೆಯ ಹೆಸರಿನಲ್ಲಿ ಭಗವಂತನ ಬೆಟ್ಟ ಪ್ರಸಿದ್ಧಿಯಾಯಿತು ಎಂದರೆ ಅದು ಶಬರಿಯ ಸಂಸ್ಕಾರದ ಶಕ್ತಿ.
ಇಂದಿನ ಪೀಳಿಗೆಗೆ ಆಧ್ಯಾತ್ಮಿಕ ಚರು; ನಮ್ಮ ದೇವನಹಳ್ಳಿಯ ಮಾತಂಗ ಸಂಸ್ಕಾರ ಗುರುಪೀಠದ ಮೂಲಕ ನಾನು ಭಕ್ತರಿಗೆ ನೀಡುವ ಸಂದೇಶವೆAದರೆ:
ಜೀವಕಾರುಣ್ಯವೇ ಸಂಸ್ಕಾರ: ಮೂಕ ಪ್ರಾಣಿಗಳಲ್ಲಿ ದೇವರನ್ನು ಕಾಣಿ, ಹಿಂಸೆಯನ್ನು ತ್ಯಜಿಸಿ.
ಗುರುವಾಕ್ಯವೇ ವೇದವಾಕ್ಯ: ಶಬರಿಯಂತೆ ಗುರುಗಳ ಮಾತಿನಲ್ಲಿ ಅಚಲ ನಂಬಿಕೆ ಇಡಿ.
ಅಂತರAಗದ ಶುದ್ಧಿ: ನಾವು ನೀಡುವ ಪ್ರತಿಯೊಂದು ಹಣ್ಣೂ (ಕರ್ಮವೂ) ದೇವರಿಗೆ ಅರ್ಪಿಸುವ ಮೊದಲು ಪ್ರೀತಿಯಿಂದ ಸಂಸ್ಕಾರಗೊಳ್ಳಬೇಕು.
ಶಬರಿಯ ಬದುಕು ನಮಗೆ ಕಲಿಸುವ ಪಾಠವೊಂದೇ’ ನಿಮ್ಮ ಸಂಕಲ್ಪ ಶುದ್ಧವಾಗಿದ್ದರೆ, ಸಂಸ್ಕಾರವು ನಿಮ್ಮನ್ನು ಯುಗಯುಗಾಂತರಗಳವರೆಗೆ ಅಮರವಾಗಿಸುತ್ತದೆ. ಅಯ್ಯಪ್ಪನ ಬೆಟ್ಟದಲ್ಲಿ ಶಬರಿ ಪೀಠವಿರುವುದು ಕೇವಲ ಪೂಜೆಗಲ್ಲ, ಅದು ನಮ್ಮೆಲ್ಲರ ಅಹಂಕಾರವನ್ನು ಕರಗಿಸಿ ಭಕ್ತಿಯನ್ನು ಜಾಗೃತಗೊಳಿಸಲು ಇರುವ ಪವಿತ್ರ ತಾಣ.
ಶುಭಮಸ್ತು. ಭಕ್ತಿಯೇ ಮುಕ್ತಿ.
——————————
ಈ ಲೇಖನವು ಸಾರ್ವಜನಿಕರಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸಲು ಮತ್ತು ಶಬರಿಯ ಮಹಿಮೆಯನ್ನು ಸಂಸ್ಕಾರಯುತವಾಗಿ ತಿಳಿಸಲು ಬರೆಯಲಾಗಿದೆ.
ಶಬರಿ: ತ್ರೇತಾಯುಗದ ಸಂಕಲ್ಪ ಮತ್ತು ಕಲಿಯುಗದ ಸಂಸ್ಕಾರದ ಮಹಾ ಸಂಗಮ



