ಬೆಂಗಳೂರು: ಮಾದಿಗ ಸಮುದಾಯ ಒಳ ಮೀಸಲಿಗಾಗಿ ಆಗ್ರಹಿಸಿ ಕಳೆದ 40 ವರ್ಷಗಳಿಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಾ ಹೋರಾಟ ನಡೆಸುತ್ತಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರುಗಳು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ರವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯು ಆರು ವರ್ಷ ಎಂಟು ತಿಂಗಳ ಕಠಿಣ ಅಧ್ಯಯನದ ಫಲವಾಗಿದೆ. ಪರಿಶಿಷ್ಟ ಜಾತಿಯೊಳಗಿನ ಇತರರಿಗೆ ಸಂಬಂಧಿಸಿದಂತೆ ಪ್ರತಿ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ವಸ್ತುನಿಷ್ಠ ವಿಶ್ಲೇಷಣೆಯು ಆಯೋಗವು ವರ್ಗದೊಳಗಿನ ಗುಂಪುಗಳ ನಡುವಿನ ಮೀಸಲಾತಿಯನ್ನು ಹೆಚ್ಚು ಸಮಾನ ರೀತಿಯಲ್ಲಿ ಮರುಹಂಚಿಕೆ ಮಾಡಲು ತರ್ಕಬದ್ಧ ಮತ್ತು ಸಮತೋಲಿತ ಶಿಫಾರಸುಗಳ ಜಾರಿ ಸೇರಿದಂತೆ ಸಾಮಾಜಿಕ,
ಸಂವಿಧಾನಿಕ ಹಕ್ಕುಗಳ ರಕ್ಷಣೆ ಒತ್ತು ನೀಡಬೇಕಿದೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ ಮತ್ತು ಡಾ.ಬಾಬು ಜಗಜೀವನರಾಮ್ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನಿಗದಿಪಡಿಸಿ ಜನಾಂಗ, ಪ್ರಾದೇಶಿಕವಾರು ಪ್ರಾತಿನಿಧ್ಯವನ್ನು ಖಾತರಿಪಡಿಸಬೇಕು ಹಾಗೂ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಥಮ ಸಚಿವ ಸಂಪುಟ ಸಭೆಯಲ್ಲೆ ಸದಾಶಿವ ಆಯೋಗದ ವರದಿ ಜಾರಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮುಂದೆ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಮುಖ್ಯಮಂತ್ರಿಗಳು ನುಡಿದಂತೆ ನಡೆಯಬೇಕು ಎಂದು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಅಗ್ರಹಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ರವರು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಕೊಟ್ಟ ಮನವಿ ಸ್ವೀಕರಿಸಿ ಮಾತನಾಡುತ್ತಾ ಶೋಷಿತ ಸಮುದಾಯಗಳು ಪ್ರಗತಿ ಕಾಣಬೇಕಾದರೆ, ಸದಾಶಿವ ಆಯೋಗದ ವರದಿ ಜಾರಿಗೆ ಬರಬೇಕು.
ಸದಾಶಿವ ಆಯೋಗದ ವರದಿ ಜಾರಿಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಈ ಕುರಿತು ಚರ್ಚೆ ನಡೆದಿದ್ದು, ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಂಡು ಜಾರಿಗೊಳಿಸಲಾಗುವುದು ಎಂದರು.
ವರದಿ ಜಾರಿಗೊಂಡರೆ ಭೋವಿ, ಕೊರಮ, ಕೊರಚ, ಲಂಬಾಣಿ ಹಾಗೂ ಇನ್ನಿತರ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲ ಸಮುದಾಯಗಳ ಸ್ಥಿತಿಗತಿ ಮತ್ತು ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡೇ ವರದಿ ಜಾರಿಗೊಳಿಸಿಯೇ ತೀರುತ್ತೇವೆ ಎಂದು ಅವರು ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರುಗಳಿಗೆ ಭರವಸೆ ನೀಡಿದರು.
ಈ ವೇಳೆ ಮಾದಿಗ ಸಂಘಟನೆಗಳ ಒಕ್ಕೂಟದ ಜಂಬೂದ್ವೀಪ ಸಿದ್ದರಾಜು, ಡಾ. ಭೀಮರಾಜು. ರಮೇಶ್ ಕುಮಾರ್, ರ. ನರಸಿಂಹಮೂರ್ತಿ, ಎಂ. ಲಿಂಗರಾಜು, ದೇವರಾಜ್, ಗಜೇಂದ್ರ, ಅಮರ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.