ಸೈ.ಸಿ. ಬಾಗೇಪಲ್ಲಿ
ಭಾಗ್ಯನಗರ: ಬೇಸಿಗೆ ರಜೆ ಆರಂಭವಾ ಗುತ್ತಿದ್ದಂತೆ ಮಕ್ಕಳು ಮನೆಯಲ್ಲಿ ಕೂರದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆಟ-ಪಾಠಗಳ ಮಧ್ಯೆ ಸ್ನೇಹಿತರೊಂದಿಗೆ ಕಾಲ ಕಳೆಯುವ ಉತ್ಸಾಹದಲ್ಲಿ ಹಲವಾರು ಮಕ್ಕಳು ಕೆರೆ, ಕಟ್ಟೆ, ಕಾಲುವೆ, ಹಳ್ಳಗಳು ಹಾಗೂ ನೀರಿನ ತೊಟ್ಟಿಗಳ ಬಳಿ ಈಜಾಡಲು ತೆರಳುತ್ತಿರುವುದು ಗಮನಕ್ಕೆ ಬರುತ್ತಿದೆ. ಆದರೆ ಈ ಪ್ರವೃತ್ತಿ ದೊಡ್ಡ ಅಪಾಯಕ್ಕೆ ಕಾರಣವಾಗಬಹುದೆಂದು ಹಿರಿಯರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕೆರೆ-ಕಟ್ಟೆಗಳು ಹೊರಗೆ ನೋಡಲು ಶಾಂತವಾಗಿ ಕಾಣಿಸಿದರೂ, ಅವುಗಳ ಆಳ ಹಾಗೂ ತಳದ ಸ್ಥಿತಿ ತಿಳಿದಿರದೆ ನೀರಿಗೆ ಇಳಿಯುವುದು ಅತ್ಯಂತ ಅಪಾಯಕಾರಿಯಾಗಿದೆ. ಅನೇಕ ಕಡೆಗಳಲ್ಲಿ ಕೆಸರು ತುಂಬಿರುವುದು, ಜಾರುವ ತೀರಗಳು, ನೀರಿನೊಳಗಿನ ಗುಂಡಿಗಳು ಇತ್ಯಾದಿ ಅಪಾಯಗಳು ಮಕ್ಕಳಿಗೆ ತಿಳಿದಿರದು. ಈಜಲು ಬಾರದ ಮಕ್ಕಳು ಸಾಹಸಕ್ಕೆ ಹೋಗುವುದು ಕೆಲವೊಮ್ಮೆ ಜೀವಾಪಾಯಕ್ಕೂ ದಾರಿ ಮಾಡಿಕೊಡುತ್ತದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಗಳು ವರದಿಯಾಗುತ್ತಿದ್ದು, ಇದು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ಒಂದು ಕ್ಷಣದ ನಿರ್ಲಕ್ಷ÷್ಯದಿಂದ ಕುಟುಂಬವೇ ದುಃಖದ ಸಾಗರದಲ್ಲಿ ಮುಳುಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದು ಉದಾಹರಣೆಗಳಿಂದಲೇ ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಮೇಲಿನ ಗಮನವನ್ನು ಇನ್ನಷ್ಟು ಕಡ್ಡಾಯಗೊಳಿಸಬೇಕಾಗಿದೆ. ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಯಾರೊಂದಿಗೆ ಹೋಗುತ್ತಾರೆ ಎಂಬುದರ ಮೇಲೆ ನಿಗಾವಹಿಸುವುದು ಅಗತ್ಯ. ವಿಶೇಷವಾಗಿ ಕೆರೆ, ಕಟ್ಟೆ, ಕಾಲುವೆ ಹಾಗೂ ಅಪಾಯಕರ ಪ್ರದೇಶಗಳಿಗೆ ಒಬ್ಬರೇ ಅಥವಾ ಸ್ನೇಹಿತರೊಂದಿಗೆ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಮಕ್ಕಳಿಗೆ ನೀರಿನ ಅಪಾಯಗಳ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದು, ಈಜು ತರಬೇತಿ ನೀಡುವಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಹಾಗೂ ಸಾರ್ವಜನಿಕ ಈಜುಕೊಳಗಳಂತಹ ಸುರಕ್ಷಿತ ಸ್ಥಳಗಳನ್ನು ಆಯ್ಕೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸ್ಥಳೀಯ ಆಡಳಿತ ಸಂಸ್ಥೆಗಳು ಕೂಡ ಅಪಾಯಕರ ಕೆರೆ-ಕಟ್ಟೆಗಳ ಬಳಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು, ಬೇಲಿ ಹಾಕುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಂದು ಕ್ಷಣದ ನಿರ್ಲಕ್ಷ÷್ಯ ಜೀವನಪೂರ್ತಿ ದುಃಖಕ್ಕೆ ಕಾರಣವಾಗಬಹುದು ಎಂಬ ಸಂದೇಶವನ್ನು ಮನದಟ್ಟುಗೊಳಿಸಿಕೊಂಡು, ಮಕ್ಕಳ ಸುರಕ್ಷತೆಗಾಗಿ ಪೋಷಕರು ಹಾಗೂ ಸಾರ್ವಜನಿಕರು ಜಾಗೃತರಾಗಬೇಕೆಂದು ಮನವಿ ಮಾಡಲಾಗಿದೆ.
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ: ಕೆರೆ, ಕಟ್ಟೆಗಳಿಗೆ ಕಳುಹಿಸಬೇಡಿ; ಪೋಷಕರಿಗೆ ಮನವಿ



