ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ತುಂಬಿ ತುಳುಕುತ್ತಿದೆ. ಮನೆಯ ಶುಭಕಾರ್ಯದಂತೆ ಎಲ್ಲಿಲ್ಲದ ಉತ್ಸಾಹ ಎಲ್ಲರಲ್ಲೂ ಹಬ್ಬಿದೆ. ರಾಮನ ಬರುವಿಕೆಗಾಗಿ ಕಾಯುತ್ತಿದ್ದ ಜನತೆ ಮನದಲ್ಲೇ ಆರಾಧಿಸುತ್ತಾ ಸಂಭ್ರಮಿಸುತ್ತಿದ್ದರು. ಎಲ್ಲರ ನೆಚ್ಚಿನ ಸಹನೆ ತುಂಬಿದ ಮಂದಹಾಸದ ರಾಮ ಅಯೋಧ್ಯೆಯಲ್ಲಿ ನೆಲೆಸಲು ಬಂದೇಬಿಟ್ಟ. ಅಯೋಧ್ಯೆಯೂ ರಾಮನ ಜನ್ಮ ಭೂಮಿ.
ಹಾಗೆಯೇ ಆಸ್ತಿಕ ಭಕ್ತರ ಪಾಲಿನ ದೇವತಾ ಮೂರ್ತಿ. ತಮ್ಮ ತಮ್ಮ ಮನೆಗಳಲ್ಲಿಯೇ ಬಂದು ನೆಲೆಸಿದಂತೆ ಭಕ್ತ, ಶ್ರದ್ಧೆಗಳಿಂದ ರಾಮನ ಬರುವಿಕೆಗಾಗಿ ಕಾಯತ್ತಿದ್ದಾರೆ. ರಾಮನ ಆಶೀರ್ವಾದವೆಂಬಂತೆ ಇಡೀ ದೇಶಕ್ಕೆ `ಮಂತ್ರಾಕ್ಷತೆ’ ಬಂದಿದೆ. ರಾಮನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿರುವ ಭಕ್ತರು ಶುಭ ಘಳಿಗೆಯಲ್ಲಿ `ದೀಪ ಬೆಳಗಿಸಿ’ ಪೂಜೆ ಮಾಡಿ ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.
ನಾನು ಹನ್ನೆರಡು ವರ್ಷಗಳ ಹಿಂದೆ ನಮ್ಮ ರಾಮಜನ್ಮಭೂಮಿ ಅಯೋಧ್ಯೆಗೆ ಕುಟುಂಬ ಸಮೇತವಾಗಿ ಹೋಗಿ ಬಂದಿದ್ದ ನೆನಪು ಇನ್ನೂ ಅಚ್ಚ ಹಸಿರಾಗಿಯೇ ಇದೆ. ರಾಮ ಲಲ್ಲಾನ ಮೂರ್ತಿಯನ್ನು ನೋಡಿ ಆನಂದಭರಿತವಾಗಿ ಬಂದ ಕ್ಷಣಗಳು ಮರೆಯಲಾಗದು.
ಪ್ರಜೆಗಳ ಹಿತಕಾಯುವುದೇ ಶ್ರೀರಾಮನ ಧ್ಯೇಯವಾಗಿತ್ತು.
ಅಲ್ಲಿನ ಜನರಿಗೆ ನಿತ್ಯವೂ ಹಬ್ಬದ ವಾತಾವರಣವೇ ಇರುತ್ತಿತ್ತು. ಅಂತಹ ಸಂತಸ ಸಂಭ್ರಮ ಮತ್ತೆ ಅಯೋಧ್ಯೆಯಲ್ಲಿ ಮರುಕಳಿಸುತ್ತಿದೆ. ಶ್ರೀರಾಮ ನಡೆದಾಡದ ತಾಣವಿಲ್ಲ ಇಡೀ ಭೂಮಂಡಲದಲ್ಲೆಲ್ಲಾ ಸಂಚರಿಸಿ ಕೋರಿಕೆಗಳನ್ನು ಈಡೇರಿಸಿರುವ ರಾಮನಿಗೂ ಕರುನಾಡಿಗೂ ಅವಿನಾಭಾವ ಸಂಬಂಧ. ರಾಮ ನಮ್ಮವನು ಎನ್ನುವುದು ಹೃದಯದ ತುಂಬಾ ತುಂಬಿದೆ.
ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪುನರ್ ಪ್ರತಿಷ್ಟಾಪನೆ. ಮನೆ, ಮನಗಳಲ್ಲಿ ರಾಮನಿಗೆ ಅಭ್ಯಂಜನ, ಅಭಿಷೇಕ, ಅಲಂಕಾರ, ನೈವೇದ್ಯ. ರಾಮನ ಪೂಜೆಯ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ತೊಡುವ ಸಂಭ್ರಮ. ನಮ್ಮ ಅಯೋಧ್ಯೆಯಲ್ಲಿ ಈಗ ಬಾಲ ರಾಮನ ಹೊಸ ಮೂರ್ತಿ ಲೋಕಾರ್ಪಣೆಯಾಗುತ್ತಿರುವುದಂತೂ ಸಂತಸ ಮನ ತುಂಬಿದೆ. ರಾಮನ ಅರಮನೆಯಲ್ಲಿ ಮತ್ತೆ ಬಾಲ ರಾಮನ ಮೂರ್ತಿಯನ್ನು ಹಾಗೂ ಅವನ ಪರಿವಾರವನ್ನು ನೋಡುವ ಕಾತುರ ಹೆಚ್ಚಾಗಿದೆ. ನಮ್ಮ ಪುಣ್ಯ ಭೂಮಿ ಭಾರತದ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಎನ್ನುವುದು ನಮ್ಮೆಲ್ಲರ ಹೆಮ್ಮೆ.
ಎಷ್ಟೋ ವರ್ಷಗಳ ಕನಸು ನನಸಾಗಿ ಕಣ್ಣ ಮುಂದೆ ನಿಂತಿರುವ ಭವ್ಯವಾದ ರಾಮನ ಮನೆ ನಮ್ಮ ಪಾಲಿನ ನೆಮ್ಮದಿಯ ತಾಣ. ಅಯೋಧ್ಯೆಗೆ ಹೋಗಿ ಮಂದಿರವನ್ನು ನೋಡುವ ಆಸೆ. ರಾಮನನ್ನು ಮತ್ತೆ ಮೂಲಸ್ಥಾನದಲ್ಲಿ ನೋಡುವ ತವಕ. ಅಂದು ಮನೆಯಲ್ಲಿ ರಾಮನ ಪೂಜೆ ಮಾಡಿ ಮನದಲ್ಲೇ ಅಯೋಧ್ಯೆಯಲ್ಲಿ ವಿಹರಿಸಿ ಕುಟುಂಬದೊಂದಿಗೆ ರಾಮನ ದೇಗುಲಕ್ಕೆ ಹೋಗಿ ಬರುವರು. ರಾಮತಾರಕ ಮಂತ್ರವನ್ನು ಪ್ರಭುವಿಗೆ ಅರ್ಪಿಸುವೆವು.
ಜನವರಿ 22ನೇ ತಾರೀಖು ಬಾಲ ರಾಮನ ಪ್ರತಿಷ್ಠಾಪನೆ. ನಮಗೆಲ್ಲಾ ಹೊಸ ಮಂದಿರ/ಮನೆಯ ಗೃಹ ಪ್ರವೇಶದ ಸಂಭ್ರಮಾಚರಣೆ. ಜನರ ಮನದಲ್ಲಿ ಎಂದೂ ಮರೆಯಲಾಗದ ಸಂಭ್ರಮ. ಅಂದು ಭಾರತದಾದ್ಯಂತ ಹಬ್ಬದ ವಾತಾವರಣ ಪೂಜೆ, ಪಾನಕ, ಕೋಸಂಬರಿ ಜೊತೆಗೆ ಸಿಹಿ ಊಟದ ರಸದೌತಣ. ದೇಗುಲಗಳಲ್ಲಿ ನಿರಂತರ ಹೋಮ ಹವನ, ಭಕ್ತಾಧಿಗಳ ಭಾವಪೂರ್ಣ ಧ್ಯಾನ.
-ಡಾ. ಆರ್. ಶೈಲಜ ಶರ್ಮಮನೆ ಮನಗಳಲ್ಲೂ ಸಹನಾ ಮೂರ್ತಿ ಶ್ರೀರಾಮಚಂದ್ರ