ಬೆಂಗಳೂರು: ಕಲೆ, ಕರಕುಶಲ, ಕೈಮಗ್ಗ, ಜೀವನ ಶೈಲಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಹೆಸರಾದ `ಮೀನಾ ಬಜಾರ್’ ಮೇಳ ಇಂದಿನಿಂದ ಕರ್ನಾಟಕ ಚಿತ್ರಕಲಾ ಪರಿಷತ್ ಆರಂಭವಾಗಿದ್ದು, ಇದೇ ನವೆಂಬರ್ ೩೦ರವರೆಗೆ ನಡೆಯಲಿದೆ. ಒಂದೇ ಸೂರಿನಡಿ ಗೃಹ ಅಲಂಕಾರ ವಸ್ತುಗಳು, ವಿವಿಧ ರಾಜ್ಯಗಳ ಸಾಂಪ್ರದಾಯಿಕ ಶೈಲಿಯ ಉಡುಗೆ – ತೊಡುಗೆಗಳು ಈ ಪ್ರದರ್ಶನದ ಹೈಲೈಟ್ಸ್ ಆಗಿದೆ.
ಕಾರ್ತಿಕ ಮಾಸದ ಸಮಯದಲ್ಲಿ ಆರಂಭವಾಗಿರುವ ಈ ಪ್ರದರ್ಶನಕ್ಕೆ ಖ್ಯಾತ ವಿಡಿಯೋ ಕಂಟೆಂಟ್ ಕ್ರಿಯೇಟರ್ ಸಂತೋಷಿ ಮೇಘರಾಜ್ ಶುಕ್ರವಾರ ಚಾಲನೆ ನೀಡಿದರು. ಗೃಹಅಲಂಕಾರಕ್ಕೆ ಬೇಕಾದಂತಹ ವಿವಿಧ ಬಗೆಯ ವಿದ್ಯುತ್ ದೀಪ, ಕರ್ಟನ್, ಪೀಠೋಪಕರಣ, ಪುರಾತನ ವಿಗ್ರಹಗಳು, ದೇವರ ಮೂರ್ತಿಗಳು ಹೀಗೆ ಹತ್ತು ಹಲವು ವಸ್ತುಗಳು ಸಿಕ್ಕರೆ, ಇನ್ನೂ ಮನಮುಟ್ಟುವ ರಾಜಸ್ಥಾನಿ ಶೈಲಿಯ ಉಡುಗೆಗಳು, ಕಿವಿಯೋಲೆ, ಕರಕುಶಲ ವಸ್ತುಗಳು ಜನರ ಮನ ಸೆಳೆಯಲಿವೆ.
ಈ ವೇಳೆ ಮಾತನಾಡಿದ ವಿಡಿಯೋ ಕಂಟೆಂಟ್ ಕ್ರಿಯೇಟರ್ ಸಂತೋಷಿ ಮೇಘರಾಜ್, “ಮುಂಬರುವ ಹಬ್ಬ ಹರಿದಿನಗಳಿಗೆ ನಿಮಗೆ ಬೇಕಾದ ಉತ್ಪನ್ನಗಳು ಇಲ್ಲಿ ಸಿಗಲಿದೆ. ದೇಶದ ವಿವಿಧ ಭಾಗಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಉತ್ಪನ್ನಗಳು ಇಲ್ಲಿ ಒಂದೇ ಸೂರಿನಡಿಯಲ್ಲಿ ಸಿಗಲಿವೆ. ಕಲಾವಿದರಿಂದ ನೇರವಾಗಿ ಗ್ರಾಹಕರನ್ನು ತಲುಪುವುದರಿಂದ ವಸ್ತುಗಳ ಬೆಲೆಯೂ ಅಗ್ಗವಾಗಿದೆ.
ಬಳೆಗಳು, ವಡವೆಗಳು, ಫ್ಯಾನ್ಸಿ ಆಭರಣಗಳು, ಪಾದರಕ್ಷೆ, ದಿನ ಬಳಕೆ ವಸ್ತುಗಳು, ಸಿಹಿತಿನಿಸುಗಳು, ಮಕ್ಕಳ ಆಟಿಕೆಗಳು, ಸುಗಂಧ ದ್ರವ್ಯಗಳು ಸೇರಿದಂತೆ ನೂರಾರು ಉತ್ಪನ್ನಗಳು ಮೀನಾ ಬಜಾರ್ ನಲ್ಲಿ ದೊರೆಯುತ್ತಿವೆ” ಎಂದರು.



