ಬಾಲಿವುಡ್ ‘ಟೈಗರ್’ ಸಲ್ಮಾನ್ ಖಾನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರು ಮತ್ತು ನಟಿಯರ ಜೊತೆ ಕೈಜೋಡಿಸುತ್ತಿರುವ ಸಲ್ಲು ಮಿಯಾ, ಈಗ ಮತ್ತೊಂದು ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಬಾರಿ ಅವರು ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿಲೋಕದಲ್ಲಿ ಸಂಚಲನ ಮೂಡಿಸಿದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ ಮೂಲಕ ಇಡೀ ಭಾರತದ ಗಮನ ಸೆಳೆದಿದ್ದ ರಾಜ್ ಮತ್ತು ಡಿಕೆ ಜೋಡಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು ಕೇವಲ ಸಾಧಾರಣ ಆಕ್ಷನ್ ಸಿನಿಮಾವಲ್ಲ, ಬದಲಿಗೆ ಒಂದು ಅದ್ಭುತವಾದ ‘ಸೂಪರ್ ಹೀರೋ’ ಸಬ್ಜೆಕ್ಟ್ ಎನ್ನಲಾಗಿದೆ. ಸಲ್ಮಾನ್ ಖಾನ್ ಈ ಹಿಂದೆ ಯಾವತ್ತೂ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಸಮಂತಾ ಮತ್ತು ಸಲ್ಮಾನ್ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಸ್ಕ್ರೀಪ್ಟ್ ಕೆಲಸಗಳು ಈಗಾಗಲೇ ಮುಗಿದಿದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸೂಪರ್ ಹೀರೋ ಆಗಿ ಸಲ್ಲು
ಸಿನಿಮಾದ ಕಥೆ ತುಂಬಾ ಕುತೂಹಲಕಾರಿಯಾಗಿದೆ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಇಲ್ಲಿ ಒಬ್ಬ ನಿವೃತ್ತ ಸೂಪರ್ ಹೀರೋ ಪಾತ್ರ ಮಾಡಲಿದ್ದಾರೆ. ಅಂದರೆ, ಈಗಾಗಲೇ ಜಗತ್ತನ್ನು ರಕ್ಷಿಸಿ ಸುಸ್ತಾಗಿರುವ, ಇನ್ನು ಸಾಕು ಎಂದು ತನ್ನ ಸೂಪರ್ ಹೀರೋ ಉಡುಪನ್ನು ಪಕ್ಕಕ್ಕಿಟ್ಟಿರುವ ವ್ಯಕ್ತಿಯ ಕಥೆ . ನೆಮ್ಮದಿಯಾಗಿ ಬದುಕಬೇಕು ಎಂದುಕೊಳ್ಳುವ ನಾಯಕನಿಗೆ ಸಂದರ್ಭಗಳು ಮತ್ತೆ ಹೋರಾಟಕ್ಕೆ ಇಳಿಯುವಂತೆ ಮಾಡುತ್ತವೆ. ಚಿತ್ರದಲ್ಲಿ ಆಕ್ಷನ್ ಜೊತೆಗೆ ಕಾಮಿಡಿ ಕೂಡ ಹದವಾಗಿ ಬೆರೆತಿದೆ. ರಾಜ್ ಮತ್ತು ಡಿಕೆ ಅವರ ಸಿನಿಮಾಗಳಲ್ಲಿ ಇರುವಂತಹ ವಿಶಿಷ್ಟ ಹಾಸ್ಯ ಈ ಸೂಪರ್ ಹೀರೋ ಕಥೆಯಲ್ಲೂ ಇರಲಿದೆ. ಸಲ್ಮಾನ್ ಖಾನ್ ಅವರ ಮ್ಯಾನರಿಸಂ ಮತ್ತು ಕಾಮಿಡಿ ಟೈಮಿಂಗ್ಗೆ ತಕ್ಕಂತೆ ಈ ಕಥೆಯನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಸಮಂತಾ – ರಾಜ್
& ಡಿಕೆ ಮ್ಯಾಜಿಕ್
ಪತಿ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಈಗಾಗಲೇ ಸಮಂತಾ ನಟಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್- ೨’ ಮತ್ತು ‘ಸಿಟಾಡೆಲ್’ ಸರಣಿಗಳಲ್ಲಿ ಸಮಂತಾ ಅದ್ಭುತವಾಗಿ ನಟಿಸಿದ್ದಾರೆ. ಈ ಹೊಸ ಚಿತ್ರದ ಪಾತ್ರಕ್ಕೂ ಸಮಂತಾ ಅವರೇ ಸೂಕ್ತ ಎಂದು ನಿರ್ದೇಶಕರು ನಿರ್ಧರಿಸಿದ್ದಾರಂತೆ. ಸಮಂತಾ ಕೂಡ ಈ ಪ್ರಾಜೆಕ್ಟ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದು, ಚಿತ್ರಕಥೆಯ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಸಮಂತಾ ಜೊತೆಗಿನ ಚಿತ್ರಕ್ಕಿಂತ ಮೊದಲು ಸಲ್ಮಾನ್ ಖಾನ್ ದಕ್ಷಿಣದ ಮತ್ತೊಬ್ಬ ಸ್ಟಾರ್ ನಟಿ ನಯನತಾರಾ ಜೊತೆ ನಟಿಸಲಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಿಸಲಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದ ಆಕ್ಷನ್ ಎಂಟಟೈರ್ನರ್ ಆಗಿರಲಿದ್ದು, ಏಪ್ರಿಲ್ ತಿಂಗಳಿನಿಂದಲೇ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ. ಒಂದೇ ವರ್ಷದಲ್ಲಿ ಸೌತ್ನ ಇಬ್ಬರು ಸ್ಟಾರ್ ನಟಿಯರ ಜೊತೆ ಸಲ್ಮಾನ್ ನಟಿಸುತ್ತಿರುವುದು ವಿಶೇಷ.
ಸಮಂತಾ ಜೊತೆ ಸಲ್ಮಾನ್ ಖಾನ್ `ದಬಾಂಗ್’ ಎಂಟ್ರಿ?



