ವಿಶ್ವ ತಾಯಂದಿರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕಾಸಿಯ ಭವನದಲ್ಲಿ ಯಮ್ಮಿ ವಾಲ್ಸ್ ಮತ್ತು ಬಿಟ್ರೆಂಡ್ಜ್ ಸಹಯೋಗದಲ್ಲಿ “ಮಾತೃ ವಂದನೆ” ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಪರಿಮಳ ಜಗ್ಗೇಶ್, ಶ್ರೀಮತಿ ಆಶಾ ಎನ್.ಆರ್, ಶ್ರೀಮತಿ ಲತಾ ಎಸ್, ಶ್ರೀಮತಿ ರೇವತಿ ಕಾಮತ್, ಶ್ರೀಮತಿ ಪೂರ್ಣಿಮಾ ಭಟ್, ಶ್ರೀಯುತ ಆನಂದರಾಮ್ ಶೆಟ್ಟಿ, ಶ್ರೀಯುತ ಹರೀಶ್ ಕುಮಾರ್, ಶ್ರೀಮತಿ ರಶ್ಮಿ ರಾವ್ ಮತ್ತು ಶ್ರೀಮತಿ ಲತಾ ಕೆ.ಎಸ್.ಹೆಗಡೆ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ತಾಯಂದಿರ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ಪ್ರತಿ ನಿತ್ಯವೂ ಕುಟುಂಬಕ್ಕಾಗಿ ಶ್ರಮಿಸುವ ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕೆಂಬ ತುಡಿತದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕಿಯರಿಗೆ ಗೌರವವನ್ನು ಸಲ್ಲಿಸಲಾಯಿತು.
ಮಹಿಳೆಯರಿಗಾಗಿ ಫ್ಯಾಷನ್ ಶೋ, ಆನ್ಲೈನ್ ಅಡುಗೆ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಮತ್ತು ಭಾಗವಹಿಸಿದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಇದಲ್ಲದೇ ತಾಯಿಯ ಮಹತ್ವವನ್ನು ಸಾರುವ ಪುಣ್ಯಕೋಟಿ ಯಕ್ಷಗಾನ ಪ್ರಸಂಗ, ಭರತನಾಟ್ಯ, ವೀಣಾ ವಾದನ, ಗೀಟಾರ್ ವಾದನ, ಕೋಲಾಟ ಮತ್ತು ಗಾಯನ ಕಾರ್ಯಕ್ರಮಗಳು ತಾಯಂದಿರ ದಿನದ ಸಂತಸ ಮತ್ತು ಸಂಭ್ರಮವನ್ನು ಇಮ್ಮಡಿಗೊಳಿಸುವುದರೊಂದಿಗೆ, ಸಂದೇಶ ನೀಡುತ್ತ, ಅಮ್ಮಂದಿರ ಮನಕೆ ಮುದ ನೀಡಿದವು. ಭೋಜನದ ನಂತರ ಭಾಗವಹಿಸಿದ್ದ ತಾಯಂದಿರಿಗೆ ಮತ್ತು ಕಲಾ ತಂಡಗಳಿಗೆ ವಿಶೇಷ ಉಡುಗೊರೆ, ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡುವುದರ ಮೂಲಕ ಬಿಟ್ರೆಂಡ್ಜ್ ತಂಡ ಮತ್ತು ಯಮ್ಮಿ ವಾಲ್ ತಂಡದವರು ತಾಯಂದಿರಿಗೆ ಗೌರವ ಸಮರ್ಪಣೆ ಸಲ್ಲಿಸಿದರು.