ಹೇಮಂತ್ ಪ್ರೊಡಕ್ಷನ್ಸ್ ಮೂಲಕ ಹೇಮಂತ್ ಕುಮಾರ್ ಅವರ ನಿರ್ಮಾಣ ಹಾಗೂ ನಿರ್ದೇಶನವಿರುವ “ಸಾಮ್ರಾಟ್ ಮಂಧಾತ” ಚಿತ್ರ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಇಕ್ಷ್ವಾಕು ವಂಶದ (ಸೂರ್ಯವಂಶ) ಯುವನಾಶ್ವ ಮಹಾರಾಜನ ಮಗನಾದ ಮಾಂಧಾತ ತನ್ನ ಸತ್ಯ ಮತ್ತು ಧರ್ಮದಿಂದ ಕೂಡಿದ ಆಡಳಿತದಿಂದಲೇ ಹೆಸರು ಗಳಿಸಿದ್ದನು.
ಶತಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂವರು ಗಂಡು ಮಕ್ಕಳು ಮತ್ತು ಐವತ್ತು ಹೆಣ್ಣುಮಕ್ಕಳಿದ್ದರೆಂದು ಹೇಳಲಾಗುತ್ತಿದೆ. ಆತನ ಕಥೆಯನ್ನು ಸಾಮ್ರಾಟ್ ಮಾಂಧಾತ ಚಿತ್ರದ ಮೂಲಕ ಹೇಮಂತ್ ಅವರು ತೆರೆಮೇಲೆ ನಿರೂಪಿಸಹೊರಟಿದ್ದಾರೆ.
ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ರಂಗಭೂಮಿ ಕಲಾವಿದರಾಗಿದ್ದು ಐದಾರು ತಿಂಗಳವರೆಗೆ ತರಬೇತಿ ಪಡೆದು ಕ್ಯಾಮೆರಾ ಮುಂದೆ ಅಭಿನಯಿಸಿದ್ದಾರೆ. ತ್ರೇತಾಯುಗದ ಆದಿಭಾಗದಲ್ಲಿ ಭೂಲೋಕದಲ್ಲಿ ಅಧರ್ಮ ಹೆಚ್ಚಾದಾಗ ಧರ್ಮದೇವ ಶನಿ ಮಹಾತ್ಮನ ಮೊರೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಶನಿ ಮತ್ತು ಲಕ್ಷ್ಮಿಯ ನಡುವೆ ಯಾರು ಶ್ರೇಷ್ಠರೆಂದು ನಿರ್ಧರಿಸುವ ಕಥೆಯೇ ಸಾಮ್ರಾಟ್ ಮಾಂಧಾತ.
ಚಿತ್ರದಲ್ಲಿ ಮಾಂಧಾತನಾಗಿ ರಂಗಭೂಮಿ ಕಲಾವಿದ ಬಸವರಾಜು ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶನಿದೇವನಾಗಿ ಸುಂದರಬಾಬು, ಬಿಂದುಮತಿಯಾಗಿ ಭಾರತಿ, ನಾರದನಾಗಿರುವ ನಂಜುಂಡಪ್ಪ, ಶೌಭರಿ ಮಹರ್ಷಿಯಾಗಿ ನರಸಿಂಹಮೂರ್ತಿ, ಯವನಾಶ್ವನಾಗಿರುವ ಮಂಜುನಾಥ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ ಮಾಂಧಾತ ಚಿತ್ರಕ್ಕೆ ಆರ್.ವೀರೇಂದ್ರಕುಮಾರ್ ಸಂಭಾಷಣೆ ಸಾಹಿತ್ಯ ರಚಿಸಿದ್ದಾರೆ. ಶಿವರಾಮ್ ಅವರ ಸಂಕಲನ ಈ ಚಿತ್ರಕ್ಕಿದೆ.