ಹನೂರು: ಮಲೆ ಮಹದೇಶ್ವರ ವನ್ಯ ಜೀವಿಧಾಮದ ಹನೂರು ಬಫರ್ ವಲಯದ ಮಂಗಲ ಗ್ರಾಮದ ವೃದ್ಧೆಯೊಬ್ಬರ ಮನೆಯಲ್ಲಿ ಸಂಗ್ರಹಣೆ ಮಾಡಿದ್ದ ಗಂಧದ ಮರದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹನೂರು ತಾಲ್ಲೂಕಿನ ಮಂಗಲ ಗ್ರಾಮದ ರಾಜಮ್ಮ ಬಂಧಿತ ಆರೋಪಿ. ಹನೂರು ಬಫರ್ ವಲಯದ ಮಂಗಲ ಗ್ರಾಮದಲ್ಲಿ ವೃದ್ಧೆಯೊಬ್ಬರ ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಶೇಖರಣೆ ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಲೆ ಮಹದೇಶ್ವರ ವನ್ಯಜೀವಿಧಾಮ ಹನೂರು ವಲಯದ ಡಿಸಿಎಫ್ ಭಾಸ್ಕರ್ ಮಾರ್ಗದರ್ಶನದಲ್ಲಿ ಎಸಿಎಫ್ ವಿರಾಜ್ ನೇತೃತ್ವದಲ್ಲಿ ವಲಯ ಆರಣ್ಯ ಅಧಿಕಾರಿ ನಾಗರಾಜು ಹಾಗೂ ಸಿಬ್ಬಂದಿ ವೃದ್ಧೆಯ ಮನೆಯ ಮೇಲೆ ದಾಳಿ ನಡೆಸಿದಾಗ ಬೀರುವಿನಲ್ಲಿ ಲಕ್ಷಾಂತರರೂ. ಮೌಲ್ಯದ ೧೦೦ ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಶೇಖರಣೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಆರೋಪಿ ಹಾಗೂ ಶೇಖರಣೆ ಮಾಡಿದ್ದ ಶ್ರೀಗಂಧದ ತುಂಡುಗಳು ಹಾಗೂ ಬೀರುವನ್ನು ವಶಕ್ಕೆ ಪಡೆದಿದ್ದಾರೆ.
ರಾಜಮ್ಮರವರಿಗೆ ಶ್ರೀಗಂಧದ ತುಂಡುಗಳನ್ನು ಯಾರು ತಂದುಕೊಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆ ಸಂಬAಧ ಸೂಕ್ತ ತನಿಖೆ ನಡೆಸಿದರೆ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಸತ್ಯಾಂಶ ಹೊರಬರಲಿದೆ.ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಉಮಾಪತಿ, ನಾಗರಾಜು, ಡಿಆರ್ಎಫ್ಒ ನಂದೀಶ್, ಸಿಬ್ಬಂದಿ ವರ್ಗದವರಾದ ವಿನಾಯಕ್, ಮಹೇಶ್, ನಿಂಗರಾಜ್, ಲಾಯಪ್ಪ, ಚಿನ್ನಸ್ವಾಮಿ, ಲಲಿತ, ಅಶೋಕ್, ಇನ್ನಿತರರು ಹಾಜರಿದ್ದರು.