ಪಾರ್ಲ್: ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಮೇಲೆ ಸದಾ ದೊಡ್ಡದೊಂದು ಅಪವಾದ ಇರುತ್ತಿತ್ತು. ಇವರು ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದಿಲ್ಲ, ಸುಲಭದಲ್ಲಿ ವಿಕೆಟ್ ಕೈಚೆಲ್ಲುತ್ತಾರೆ, ಅಗ್ಗಕ್ಕೆ ಔಟಾಗುತ್ತಾರೆ ಹೀಗೆ. ಈ ಕಾರಣಕ್ಕಾಗಿ ವಿಶ್ವಕಪ್ ತಂಡದಲ್ಲೂ ಇವರಿಗೆ ಸ್ಥಾನ ತಪ್ಪಿತ್ತು.
ಆದರೆ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗುವುದರೊಂದಿಗೆ ಅಜ್ಞಾತವಾಸದಿಂದ ಮುಕ್ತರಾದರು. ಇದೀಗ ನಿರ್ಣಾಯಕ ಏಕದಿನದಲ್ಲಿ ಸೆಂಚುರಿ ಬಾರಿಸಿ ಭಾರತದ ಸರಣಿ ಗೆಲುವಿನ ಹೀರೋ ಆಗಿ ಮೂಡಿಬಂದಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಸಂಜು ಸ್ಯಾಮ್ಸನ್, ಕಳೆದ 3-4 ತಿಂಗಳು ನನ್ನ ಪಾಲಿಗೆ ದೊಡ್ಡ ಮಾನಸಿಕ ಸವಾಲಾಗಿ ಪರಿಣಮಿಸಿತ್ತು.
ಈ ಒತ್ತಡವನ್ನೆಲ್ಲ ನಿಭಾಯಿಸಿ ಈ ಪ್ರವಾಸಕ್ಕೆ ಅಣಿಯಾದೆ. ಈಗ ನಿರಾಳನಾಗಿದ್ದೇನೆ, ಮಾನಸಿಕ ಸವಾಲು ಗೆದ್ದಿದ್ದೇನೆ. ಬಹಳ ಸಂತೋಷವಾಗಿದೆ ಎಂಬುದಾಗಿ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಹೇಳಿದರು.
ಸಂಜು ಅವರ 108 ರನ್ ಸಾಹಸದಿಂದ ಪಾರ್ಲ್ ಪಂದ್ಯದಲ್ಲಿ ಭಾರತ 8 ವಿಕೆಟಿಗೆ 296 ರನ್ ಬಾರಿಸಿತು.
ಜವಾಬಿತ್ತ ದಕ್ಷಿಣ ಆಫ್ರಿಕಾ 45.5 ಓವರ್ಗಳಲ್ಲಿ 218ಕ್ಕೆ ಕುಸಿಯಿತು. ಭಾರತ 2-1 ಅಂತರದಿಂದ ಸರಣಿ ಜಯಿಸಿತು. ಸಂಜು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನನ್ನ ಜೀನ್ಸ್ನಲ್ಲೇ ಕ್ರೀಡೆ ಇದೆ. ತಂದೆ ಕೂಡ ಕ್ರೀಡಾಪಟು. ಎಷ್ಟೇ ಹಿನ್ನಡೆಯಾದರೂ ಬೌನ್ಸ್ ಬ್ಯಾಕ್ ಒಂದೇ ನಮ್ಮ ಮುಂದಿರುವ ಹಾದಿ ಎಂಬುದಾಗಿ ಹೇಳಿದರು.ನಾನು ಸ್ಕೋರ್ಬೋರ್ಡ್ ಕಡೆ ನೋಡಲೇ ಇಲ್ಲ. ಮೊದಲು ಇನ್ನಿಂಗ್ಸ್ ಬೆಳೆಸಬೇಕಿತ್ತು. ತಿಲಕ್ ಜತೆಗೂಡಿದ ಬಳಿಕ ಬ್ಯಾಟಿಂಗ್ ಸರಾಗವಾಗಿ ಸಾಗಿತು ಎಂದರು.