This is the title of the web page
This is the title of the web page

ಜೆಡಿಎಸ್‍ನಿಂದ ಸವಿತಾ ಸಮಾಜದ ಸಮಾವೇಶ

ಕೋಲಾರ: ರಾಜ್ಯ ಸರಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದರೂ ಹಸಿದವನಿಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಕೇವಲ 5ಕೋಟಿರೂ ಅನುದಾನ ನೀಡಲಾಗಿದ್ದು, ಜಿಲ್ಲೆಯಲ್ಲಿ ಸವಿತಾ ಸಮಾಜದ ಅಭಿವೃದ್ಧಿಗಾಗಿ ಪ್ರತಿವರ್ಷವೂ ತಮ್ಮ ಅನುದಾನದಲ್ಲಿ ತಲಾ 5 ಲಕ್ಷರೂ.ನೀಡುವುದಾಗಿ ಎಂಎಲ್ಸಿ ಇಂಚರ ಗೋವಿಂದರಾಜು ಘೋಷಿಸಿದರು.

ನಗರದ ಗೋಲ್ಡನ್ ಪ್ಯಾಲೇಸ್‍ನಲ್ಲಿ ಮಂಗಳವಾರ ನಡೆದ ಜೆಡಿಎಸ್ ಸವಿತಾ ಸಮಾಜದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ 5 ಲಕ್ಷ ನೀಡಿದ್ದೇನೆ. ನನ್ನ ಅವಧಿ ಇನ್ನೂ 3 ವರ್ಷವಿದ್ದು ಪ್ರತಿ ವರ್ಷವೂ ತಲಾ 5 ಲಕ್ಷರೂ ನೀಡಲಾಗುವುದಾಗಿ ಘೋಷಿಸಿದರು. ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ 5 ಕೋಟಿರೂ ನೀಡಿರುವುದು ಸರಕಾರವು ನಿಮ್ಮನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಸವಿತಾ ಮಹರ್ಷಿಗಳ ಜಯಂತಿಗೆ ನಾನು ಬಿಟ್ಟರೆ ಯಾವ ಶಾಸಕರೂ ಇರಲಿಲ್ಲ. ನಿಮ್ಮ ಜತೆಗೆ ಯಾರು ಇರುತ್ತಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಬೇರೆ ಯವರಂತೆ ರಾಜಕಾರಣ ಮಾಡಿ ಏನನ್ನೂ ಸಂಪಾದಿಸಲು ನಾವು ಬಂದಿಲ್ಲ ಆದರೆ ಕೆಲವರು 40 ವರ್ಷ ತಮ್ಮ ಕುಟುಂಬ ಪೋಷಣೆಗಾಗಿ ಭ್ರಷ್ಟಾಚಾರದೊಂದಿಗೆ ರಾಜಕಾರಣಮಾಡಿದ್ದಾರೆ. 15 ವರ್ಷಗಳಿಂದ ನಮ್ಮನ್ನು ಶೋಷಣೆ ಮಾಡಿಕೊಂಡು ಬಂದಿ ರುವ ಶಾಸಕರಿಗೆ ತಕ್ಕ ಪಾಠ ಕಲಿಸಲು ನಿಮ್ಮ ಮನೆ ಮಗ ಸಿಎಂಆ ರ್ ಶ್ರೀನಾಥ್ ಅವರ ಕೈ ಹಿಡಿಯಿರಿ. ನಾನು ಅವರು ಸೇರಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಡಲಾಗುವುದಾಗಿ ಹೇಳಿದರು.

ಈ ವೇಳೆ ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್ ಮಾತನಾಡಿ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದರೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಸವಿತಾ ಸಮಾಜವಾಗಿದ್ದು, ಗ್ರಾಮೀಣ ಭಾಗದಲ್ಲಿ ಬಡವರು ಹಾಗೆಯೇ ಉಳಿದಿದ್ದಾರೆ ಎಂದ ಅವರು, ಕಾಂಗ್ರೆಸ್‍ನವರಿಗೆ ಅವರ ಮೇಲೆ ಅವರಿಗೇ ಗ್ಯಾರೆಂಟಿ ಇಲ್ಲದೆ ಮನೆಮನೆಗೆ ಗ್ಯಾರೆಂಟಿ ಕಾರ್ಡ್ ಕೊಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಜಿಪಂ ಮಾಜಿ ಸದಸ್ಯ ಬಾಲಾಜಿ ಚನ್ನಯ್ಯ ಮಾತನಾಡಿ, ಸಿದ್ದರಾಮಯ್ಯ ಬರ್ತಾರೆ ಗೆಲ್ತಾರೆ ಅಂತ ಹೋದ ಕಡೆಯಲ್ಲ ಹೇಳೋ ಬದಲು ಕ್ಯಾಸೆಟ್ ಒಂದು ರೆಡಿ ಮಾಡಿಕೊಡ್ತೇವೆ ಹಾಕಿಕೊಂಡು ಓಡಾಡಿ ಎಂದು ಶಾಸಕ ಕೆ.ಶ್ರೀನಿವಾಸಗೌಡರನ್ನು ವ್ಯಂಗ್ಯವಾಡಿದ ಅವರು, ಈ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಇಂಗು ತಿಂದ ಮಂಗನಂತಾಗುತ್ತೀರಿ ಎಂದು ಎಚ್ಚರಿಸಿದರು.

ಪ್ರಾಸ್ತಾವಿಕವಾಗಿ ಪ್ರೊಫೆಸರ್ ಗೋವಿಂದಪ್ಪ ಮಾತನಾಡಿ, ಈಗಾಗಲೇ ಅನೇಕ ಜಾತಿಗಳಿರುವ 2ಎ ಗೆ ಸವಿತಾ ಸಮಾಜವನ್ನು ಸೇರಿಸಿದ್ದು, ನಾವೆಲ್ಲರೂ ಹೋರಾಟದ ಮೂಲಕ ಕೂಗು ಹಾಕದಿದ್ದರೆ ತೊಂದರೆಯಲ್ಲೇ ಮುಂದುವರೆಯಬೇಕಾಗುತ್ತದೆ ಎಂದ ಅವರು, ಈವರೆಗೂ ಯಾರೂ ಸಹ ನಿಮ್ಮನ್ನು ಸಂಘಟಿಸಿ ಸಮಾವೇಶ ಮಾಡಿಲ್ಲ, ಜೆಡಿಎಸ್ ಪಕ್ಷ ಮನೆ ಬಾಗಿಲಿಗೆ ಬಂದಿದ್ದು ಅದನ್ನು ಗೌರವಿಸಿ ಕೈಹಿಡಿದರೆ ಸಮಾಜಕ್ಕೂ ಒಳಿತು ಎಂದು ಹೇಳಿದರು.

ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ ಹೋದ ಕಡೆಯಲ್ಲೆಲ್ಲಾ ಸಮಸ್ಯೆಗಳನ್ನು ಈಗಾಗಲೇ ಪಟ್ಟಿ ಮಾಡಿಕೊಂಡು ಬರುತ್ತಿದ್ದು, ನಾನು ಶಾಸಕನಾದರೆ ಸರಕಾರದ 1 ರೂಪಾಯಿಯೂ ಪೋಲಾಗದಂತೆ ಕ್ಷೇತ್ರದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುತ್ತೇನೆ ನಿಮ್ಮ ಮನೆ ಮಗನಾಗಿ ದುಡಿಯಲು ನಾನು ಸಿದ್ದನಿದ್ದೇನೆ. ತಮ್ಮ ಒಂದು ಮತ ನೀಡಿ ಬೆಂಬಲಿಸಿ. ಭರವಸೆಗಳಿಗಷ್ಟೇ ನಾನು ಸೀಮಿತವಲ್ಲ. ಈಡೇರಿಸುವುದೇ ನನ್ನ ಕಾಯಕ.ಲಂಚಮುಕ್ತ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಒಳ್ಳೆಯ ಅಧಿಕಾರಿಗಳಿಂದ ಉತ್ತಮ ಸೇವೆ ಮಾಡಿಸಬೇಕು ಎನ್ನುವುದೇ ನನ್ನ ಉದ್ದೇಶ ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ಎಪಿಎಂಸಿ ಮಾರುಕಟ್ಟೆ ಬಳಿಯಿಂದ 50 ನಾದಸ್ವರ-ಡೋಲುಗಳ ಕಲಾವಿದರು, ಸವಿತಾ ಸಮಾಜದ ಸಾವಿರಾರು ಮಂದಿಯೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕರೆ ಮೂಲಕ ಮಾತನಾಡಿ, ಮತಯಾಚಿಸಿದರು. ಜೆಡಿಯು ಹಿರಿಯ ಮುಖಂಡ ಶ್ರೀರಾಮ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಮುಖಂಡ ಸಿಎಂಆರ್ ಹರೀಶ್, ಜೆಟ್ ಅಶೋಕ್, ಖಲೀಲ್ ಅಹಮದ್, ಇಮ್ರಾನ್ ಪಾಷ, ಮುಕ್ಕಡ್ ವೆಂಕಟೇಶ್, ಭೋವಿ ಸಂಘದ ಮುನಿಯಪ್ಪ, ರಫೀಕ್, ದೇವರಾಜ್, ಕೀಲುಕೋಟೆ ವೆಂಕಟೇಶ್, ರಫೀಕ್, ಸವಿತಾ ಸಮಾಜದ ರವಿ, ಮಂಗಸಂದ್ರ ನಾಗೇಶ್, ಅಂಬರೀಶ್, ಶ್ರೀಧರ್, ಗೋವಿಂದರಾಜು, ನಾರಾಯಣಸ್ವಾಮಿ, ನಾದಸ್ವರ ಕೆಂಪರಾಜ್, ಯಲವಾರ ನಾರಾಯಣಸ್ವಾಮಿ, ಶಂಕರಪ್ಪ, ಮುನಿರಾಜು, ಶಿವು ಇದ್ದರು.