ಬೆಂಗಳೂರು: ನಿರ್ಮಾಣ ಹಂತದ ಶಾಲೆ ಕಟ್ಟಡ ಕುಸಿತಗೊಂಡು ಅದರಡಿಯಲ್ಲಿ ಸಿಲುಕಿಕೊಂಡ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡಿರುವ ದುರ್ಘಟನೆ ಆನೇಕಲ್ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಸೇಂಟ್ ಅಗ್ನೇಸ್ ಎಂಬ ಶಾಲಾ ಕಟ್ಟಡ ಇಲ್ಲಿ ನಿರ್ಮಾಣವಾಗುತ್ತಿತ್ತು.
ಕಟ್ಟಡದ ಎರಡನೇ ಅಂತಸ್ತಿನ ನಿರ್ಮಾಣದ ವೇಳೆ ಕುಸಿತ ಉಂಟಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿದರು. ಕುಸಿದ ಕಟ್ಟಡದ ಕೆಳಗೆ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲಾಗಿದೆ. ಇಬ್ಬರು ಮೃತಪಟ್ಟಿದ್ದಾರೆ.
ಕುಸಿತದ ಸ್ಥಳದಲ್ಲಿ ಒಟ್ಟು ಇಪ್ಪತ್ತಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಎರಡನೇ ಮಹಡಿಯ ಸೆಂಟ್ರಿಂಗ್ ಹಾಕಿ ಕಾಂಕ್ರೀಟ್ ಹಾಕಲಾಗುತ್ತಿತ್ತು.
ಈ ಸಮಯದಲ್ಲಿ ಭಾರ ತಡೆಯಲಾಗದೆ ಮರದ ಆಧಾರ ಕಂಬಗಳು ಹಾಗೂ ಸೆಂಟ್ರಿಂಗ್ ಕುಸಿದು ಸಿಮೆಂಟ್ ಹಾಗೂ ಕಬ್ಬಿಣ ಕೆಳಗೆ ಸುರಿದಿದೆ. ಕುಸಿದ ಸ್ಥಳದಲ್ಲಿದ್ದ 20 ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ.ಗಾಯಗೊಂಡ ಕಾರ್ಮಿಕರು ಕಲ್ಕತ್ತಾ ಮೂಲದವರು ಎನ್ನಲಾಗಿದೆ. 20 ಮಂದಿಯಲ್ಲಿ ಐದು ಜನರ ಸ್ಥಿತಿ ಗಂಬೀರವಾಗಿತ್ತು.
ಗಾಯಗೊಂಡಿದ್ದವರ ಪೈಕಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಥಮ ಚಿಕಿತ್ಸೆಯ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.