90ರ ದಶಕದ ವಿದ್ಯಾರ್ಥಿಗಳು ಭಾನುವಾರಕ್ಕಾಗಿ ಕಾಯುತ್ತಿದ್ದರು. ಪಾಠಕ್ಕೆ ಬಿಡುವು ಕೊಟ್ಟು ಆಟವಾಡಲು ಒಂದು ಕಡೆಯಾದರೆ, ಅಂದಿನ ದಿನ ಪತ್ರಿಕೆಗಳಲ್ಲಿ ವಿಶೇಷ ಅಂಕಣ ಬರುತ್ತಿದ್ದವು. ಒಂದಕ್ಕಿಂತ ಒಂದು ಬರಹಗಳು ಕುತೂಹಲ ಮತ್ತು ಗಮನ ಸೆಳೆಯುತ್ತಿದ್ದವು.
ಉದಾಹರಣೆ ಬಣ್ಣ ಬದಲಿಸುವ ಲಿಂಗ, ಈಜಿಪ್ಟ್ ಪಿರಮಿಡ್ ಸರಣಿಗಳು, ಮಮ್ಮಿಗಳ ಅನ್ವೇಷಣೆ, ದೇವಸ್ಥಾನ ಗೋಪುರದ ನೆರಳು ಭೂಮಿ ಮೇಲೆ ಕಾಣುವುದಿಲ್ಲವಂತೆ,ಹೀಗೆ ಬಗೆ ಬಗೆಯ ವಿಶೇಷ ಅಂಕಣ ಮತ್ತು ಅವುಗಳ ಚಿತ್ರದೊಂದಿಗಿನ ವಿವರಣೆ ನಮ್ಮನ್ನು ಮೂಕವಿಸ್ಮಿತರಾಗಿ ಮಾಡುತ್ತಿತು ಎಂದರೆ ಅತಿಶಯೋಕ್ತಿ ಆಗುತ್ತಿರಲಿಲ್ಲ.
ಈ ರೀತಿ ವಿಶೇಷ ಅಂಕಣಗಳ ತುಣುಕುಗಳನ್ನು ಸಂಗ್ರಹ ಮಾಡಿ ಪುಸ್ತಕದಲ್ಲಿ ಅದನ್ನು ಅಂಟಿಸಿ, ಮರು ದಿನ ಶಾಲೆಯಲ್ಲಿ ಸಹಪಾಠಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಕಾಲ ನಿಜಕ್ಕೂ ಸುಂದರ.ನಾವು ಸಹ ಮುಂದಿನ ವಾರ ಹೊಸ ವಿಷಯಗಳನ್ನು ತಿಳಿದು, ಗೆಳೆಯರೊಂದಿಗೆ ಚರ್ಚಿಸಲು ಪತ್ರಿಕೆ ಖರೀದಿ ಮಾಡಲು ಮುಂದಾಗುತ್ತಿದ್ದರು.
ಆಗ ಕೆಲವರಷ್ಟೇ ವಿಷಯ ತಿಳಿದವರು ಇರುತ್ತಿದ್ದರು, ಕಲಿಯುವ ಆಸಕ್ತರು ಹೇರಳವಾಗಿದ್ದರೆ. ಆದರೆ ಈಗ ಕೆಲವರು ಒಂದು ವಿಷಯದ ಬಗೆ ಪರಿಪೂರ್ಣ ಮಾಹಿತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ವೈದ್ಯರಂತೆ, ವಿಜ್ಞಾನಿಗಳಂತೆ ಸಲಹೆ, ಮಾಹಿತಿ ಕೊಡುತ್ತಿದ್ದಾರೆ.ಈ ಪೀಳಿಗೆಯ ಮಕ್ಕಳು ನಮಗಿಂತ ಹೆಚ್ಚಿಗೆ ಕಲಿಯುತ್ತಿದ್ದಾರೆ. ಆದರೂ, ಇದರ ಗುಣಮಟ್ಟ ಯೋಚಿಸಬೇಕಿದೆ.ಯಾರಿಂದ ಕಲಿಯುತ್ತಿದ್ದಾರೆ ಅನ್ನುವುದು ಅಷ್ಟೇ ಮುಖ್ಯ.
ಇಂದಿನ ವೇಗವಾಗಿ ಬೆಳೆಯುತ್ತಿರುವ ಯುಗದಲ್ಲಿ ತುಣುಕು ಪುಸ್ತಕದ ಮಹತ್ವ, ಅದು ಹೊಸ ಹೊಸ ವಿಷಯಗಳನ್ನು ಕಲಿಸಿ ನಮ್ಮನ್ನು ನಲಿಸುತ್ತಿದ್ದ ರೀತಿ ನಿಜಕ್ಕೂ ಅದ್ಭುತ.