ನವದೆಹಲಿ: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎದುರಿಸಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ರಾಜ್ಯಸಭೆಯ ವಿರೋಧಪಕ್ಷ ನಾಯಕರೂ ಆಗಿರುವ ಖರ್ಗೆ ಮಂಗಳವಾರ ರಾತ್ರಿ ಬರೆದ ಪತ್ರವು ಕಾಂಗ್ರೆಸ್ ನಾಯಕನ ಸುರಕ್ಷತೆಯ ಬಗ್ಗೆ ಮೂಡಿರುವ ಕಳವಳವನ್ನು ಎತ್ತಿ ಹೇಳಿದೆ. ಜನವರಿ 22ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಗಾವಲು ಪಡೆಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಸ್ಸಾಂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಕಾರ್ಯಕರ್ತರ ಬೆಂಗಾವಲು…ವಾಹನವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹೀಗಾಗಿ ರಾಹುಲ್ ಗಾಂಧಿ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ. ಮಂಗಳವಾರ ಗುವಾಹಟಿಯ ಹೊರವಲಯದಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ ನಂತರ ಅಮಿತ್ ಶಾ ಗೆ ಪತ್ರ ಬರೆಯಲಾಗಿದೆ.
ಶಾ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಹಾಗೂ ಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ದೈಹಿಕ ಹಾನಿಗೆ ಕಾರಣವಾಗುವ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರನ್ನು ವಿನಂತಿಸುತ್ತೇನೆ ಎಂದಿದ್ದಾರೆ.