ರಾಮನಗರ: ನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಒಕ್ಕಲಿಗರ ಭವನ ಸಂಕೀರ್ಣದಲ್ಲಿರುವ ವಿ.ಆರ್.ಎಲ್.ಲಾಜಿಸ್ಟಿಕ್ ಗೋದಾಮಿನಲ್ಲಿ ಸೀರೆ /ಡ್ರೆಸ್ ಪೀಸ್ಗಳು ತುಂಬಿದ್ದ ವಾಹನವನ್ನು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ರಾತ್ರಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಲೋಕಸ ಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂ ಚುವುದಕ್ಕಾಗಿ ಕಾಂಗ್ರೆಸ್ನವರು ಸೀರೆಗಳನ್ನು ಗೋದಾ ಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.ರಾತ್ರಿ 9ರ ಸುಮಾರಿಗೆ ಗೋದಾಮಿನಿಂದ ವಾಹನವೊಂದರಲ್ಲಿ ಡ್ರೆಸ್ ಪೀಸ್ಗಳನ್ನು ಸಾಗಿಸಲಾಗುತ್ತಿತ್ತು.
ಇದನ್ನು ಗಮನಿಸಿದ ಪಕ್ಷದ ಕಾರ್ಯಕರ್ತರೊಬ್ಬರು ಉಳಿದವರಿಗೆ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಡಿವೈಎಸ್ಪಿ ದಿನಕರ ಶೆಟ್ಟಿ, ರಾಮನಗರ ಪುರ ಠಾಣೆ ಪಿಎಸ್ಐ ಆಕಾಶ್ ಹಾಗೂ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಗೋದಾಮು ಪರಿಶೀಲಿಸಿದರು. ಗೋದಾಮಿನ ಸಿಬ್ಬಂದಿ ಹಾಗೂ ವಾಹನ ಚಾಲಕನನ್ನು ವಿಚಾರಿಸಿ, ಡ್ರೆಸ್ ಪೀಸ್ಗಳಿಗೆ ಸಂಬಂಧಿಸಿದ ಬಿಲ್ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿದರು.
ಸೂರತ್ನಿಂದ ಬಂದಿರೋ ಸೀರೆ /ಡ್ರೆಸ್ ಪೀಸ್: ಗುಜರಾತ್ನ ಸೂರತ್ನಿಂದ ರಾಮನಗರದ ಎನ್.ಎಂ. ಗ್ರಾನೈಟ್ಸ್ ಎಂಬ ವಿಳಾಸಕ್ಕೆ ಬಂದಿರುವ ರಸೀತಿಯನ್ನು ಗೋದಾಮು ಸಿಬ್ಬಂದಿಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳಿಗೆ ತೋರಿಸಿದರು. ನಂತರ, ಕಾರ್ಯಕರ್ತರ ಒತ್ತಾಯದ ಮೇರೆಗೆ ಪೊಲೀಸರು ಭವನದ ಅಕ್ಕಪಕ್ಕದ ಕೊಠಡಿಗಳ ಬೀಗ ತೆಗೆಸಿ ಪರಿಶೀಲನೆ ನಡೆಸಿದರು. ಅಲ್ಲಿ ಯಾವುದೇ ಡ್ರೆಸ್ ಪೀಸ್ಗಳು ಕಂಡುಬರಲಿಲ್ಲ.
ಈ ಎಲ್ಲಾ ಪ್ರಕ್ರಿಯೆ ನಡೆಯುತ್ತಿರುವಾಗಲೇ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ಕುಮಾರ್ ಹಾಗೂ ಕೆಲ ಕಾರ್ಯಕರ್ತರು ಸ್ಥಳಕ್ಕೆ ಬಂದರು. ಈ ವೇಳೆ, ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಡ್ರೆಸ್ ಪೀಸ್ಗಳು ಕಾಂಗ್ರೆಸ್ಗೆ ಸೇರಿವೆ ಎಂದರು. ಆಗ ಎರಡು ಪಕ್ಷದ ಕಾರ್ಯಕರ್ತರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಪೊಲೀಸರು ಕೂಡಲೇ ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.
`ಡ್ರೆಸ್ ಪೀಸ್ಗಳನ್ನು ತರಿಸಿರುವುದಕ್ಕೆ ಬಿಲ್ ಸೇರಿದಂತೆ ದಾಖಲೆಗಳನ್ನು ಗೋದಾಮು ಸಿಬ್ಬಂದಿ ತೋರಿಸಿದ್ದಾರೆ. ಸೀರೆಗಳು ರಾಮನಗರದ ಎನ್.ಎಂ. ಗ್ರಾನೈಟ್ಸ್ ಎಂಬ ವಿಳಾಸಕ್ಕೆ ಬಂದಿದ್ದು, ಯಾವ ಉದ್ದೇಶಕ್ಕೆ ತರಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸ್ಥಳದಲ್ಲಿದ್ದ ಶಾಸಕರ ಆಪ್ತ: ನಾವು ಬರುವುದಕ್ಕೆ ಮುಂಚೆ ಗೋದಾಮಿನಿಂದ ನಾಲ್ಕು ವಾಹನಗಳು ಡ್ರೆಸ್ ಪೀಸ್ಗಳನ್ನು ತುಂಬಿಕೊಂಡು ಹೋಗಿದ್ದವು. ಮತ್ತೊಂದು ವಾಹನಕ್ಕೆ ತುಂಬಿಸುತ್ತಿದ್ದಾಗ ಪಕ್ಷದ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಕಾರ್ಯಕರ್ತರು ಬಂದು ಪರಿಶೀಲಿಸಿ ತಡೆದು ಪೊಲೀಸರಿಗೆ ಮಾಹಿತಿ ನೀಡಿದೆವು. ಸ್ಥಳಕ್ಕೆ ನಾವು ಬಂದಾಗ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅವರ ಆಪ್ತ ವಸೀಂ ಎಂಬುವರು ಇದ್ದರು.
ಅವರೇ ವಾಹನಕ್ಕೆ ಡ್ರೆಸ್ ಪೀಸ್ಗಳಿದ್ದ ಮೂಟೆಗಳನ್ನು ತುಂಬಿಸುತ್ತಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಕಾಂಗ್ರೆಸ್ನವರು ತರಿಸಿದ್ದು, ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡರಾದ ಗೂಳಿ ಕುಮಾರ್, ಉಮೇಶ್ ಹಾಗೂ ಬಿಜೆಪಿ ಮುಖಂಡರು ಆಗ್ರಹಿಸಿದರು.