ರಾಯ್ಪುರ: ಭದ್ರತಾ ಪಡೆ ಹಾಗೂ ಬಿಜಾಪುರ ಪೊಲೀಸರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಡ್ಪಲ ಬೇಸ್ ಕ್ಯಾಂಪ್ನ ಕೋಬ್ರಾ ೨೦೬, ಸಿಆರ್ಪಿಎಫ್ ೨೨೯, ೧೫೩ ಮತ್ತು ೧೯೬ ಮತ್ತು ಬಿಜಾಪುರ ಪೊಲೀಸರು ಕೆಜಿಹೆಚ್ ತಪ್ಪಲಿನ ಪ್ರದೇಶದಲ್ಲಿ ಜಂಟಿ ಕಾರ್ಯಚರಣೆ ನಡೆಸಿದ್ದಾರೆ. ಈ ವೇಳೆ ನಕ್ಸಲರು ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ೫೧ ಜೀವಂತ ಬಿಜಿಎಲ್ಗಳು, ೧೦೦ ಬಂಡಲ್ಗಳ ಹೆಚ್ಟಿ ಅಲ್ಯೂಮಿನಿಯಂ ತಂತಿ, ೫೦ ಸ್ಟೀಲ್ ಪೈಪ್ಗಳು, ಬಿಜಿಎಲ್ ನಿರ್ಮಾಣಕ್ಕಾಗಿ ದೊಡ್ಡ ಪ್ರಮಾಣದ ವಿದ್ಯುತ್ ತಂತಿ, ೨೦ ಕಬ್ಬಿಣದ ಹಾಳೆಗಳು ಮತ್ತು ೪೦ ಕಬ್ಬಿಣದ ತಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅದಲ್ಲದೇ ನಕ್ಸಲರು ಇಟ್ಟಿದ್ದ ಐದು ಐಇಡಿಗಳು ಕೂಡ ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಸದ್ಯ ಸ್ಫೋಟಕ ವಸ್ತುಗಳು ಪತ್ತೆಯಾದ ಪ್ರದೇಶದಲ್ಲಿ ನಿರಂತರ ಗಸ್ತು ನಡೆಸಲಾಗುತ್ತಿದೆ.