ಆನೇಕಲ್: ತಾಲ್ಲೂಕಿನ ನೆರಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಸಂದ್ರದಲ್ಲಿರುವ ಶ್ರೀ ಶಾರದ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಲಾವಣ್ಯ ವಿ. ಹಾಗೂ ಕುಮಾರಿ ಮುಬೀನಾ ಅವರು ರಾಷ್ಟ್ರಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಕರ್ನಾಟಕ ರಾಜ್ಯ ಖೋಖೋ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀ ರಾಮಕೃಷ್ಣ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಡಾ|| ಟಿ.ಆರ್ ಕೇಶವರೆಡ್ಡಿ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿನಿಯರಾದ ಲಾವಣ್ಯ ಹಾಗೂ ಮುಬೀನಾ ಅವರು ಕರ್ನಾಟಕ ರಾಜ್ಯ ಖೋಖೋ ತಂಡಕ್ಕೆ ಆಯ್ಕೆಯಾಗಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.
ನಿರಂತರ ಅಭ್ಯಾಸ, ಶಿಸ್ತಿನ ನಿಲುವು ಮತ್ತು ಶಿಕ್ಷಕರ ಮಾರ್ಗದರ್ಶನದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿರುವುದು ಉಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಡಿಸಂಬರ್ ತಿಂಗಳಿನಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಕೀರ್ತಿ ತರುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಶ್ರೀ ರಾಮಕೃಷ್ಣ ಎಜುಕೇಶನ್ ಸೊಸೈಟಿಯ ನಿರ್ದೇಶಕರು ಮತ್ತು ಖೋಖೋ ತಂಡದ ಮಾರ್ಗದರ್ಶಕರು ಆಗಿರುವ ಕೆ.ಆರ್ ಜಯರಾಮ್ ಮತ್ತು ಶಾಲೆಯ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.



