ತಿ.ನರಸೀಪುರ: ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲದೇ ಅಭಿವೃದ್ಧಿ ಕುಂಠಿತಗೊಂಡು ಜಡ್ಡು ಬಿದ್ದಿರುವ ತಾಲ್ಲೂಕು ಕೃಷಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಕಾಯಕಲ್ಪ ನೀಡಲು ಕಾಂಗ್ರೆಸ್ ಬೆಂಬಲಿತರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಹಿರಿಯ ಸಹಕಾರಿ ಶಂಕರೇಗೌಡರಂತಹ ಸೇವೆ ಅಗತ್ಯವಿದೆ ಎಂದು ಮಾಜಿ ಶಾಸಕಿ ಸುನಿತ ವೀರಪ್ಪ ಗೌಡ ಹೇಳಿದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರುಗಳನ್ನು ಆಯ್ಕೆ ಮಾಡುವ ಸಂಬಂಧ ಮುಂದಿನ ತಿಂಗಳು ಸಾಮಾನ್ಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ನಿರ್ದೇಶಕ ಸ್ಥಾನದ ಆಕಾಂಕ್ಷಿಗಳು, ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಚುನಾವಣೆಯಾಗಬಾರದು. ಅದು ರಾಜಕೀಯೇತರ ಸಂಸ್ಥೆಯಾಗಿರಬೇಕು. ಆದರೆ ಇಲ್ಲಿನ ಸಂಘ ಕೆಲವು ಸ್ವಾರ್ಥಿಗಳ ಕೈಗೆ ಸಿಕ್ಕಿ ನಲುಗಿಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಚುನಾವಣೆಯನ್ನು ಎಲ್ಲರೂ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಆಡಳಿತ ಮಂಡಳಿ ನಿರ್ದೇಶಕರ ಸ್ಥಾನವನ್ನು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಲು, ಹಳೇ ಕಮಿಟಿಯನ್ನು ಬದಲಾವಣೆ ಮಾಡುವ ಮೂಲಕ ಪ್ರಗತಿ ಪರವಾಗಿ ಆಲೋಚನೆ ಮಾಡುವ ಸದಸ್ಯರ ಆಯ್ಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ನಾವು ಈಗಾಗಲೇ 3,600 ಸದಸ್ಯರನ್ನು ಸಂಘದ ಸದಸ್ಯರಾಗಿ ನೋಂದಣಿ ಮಾಡಿಸಿದ್ದು, ಇಷ್ಟೂ ಫೆಬ್ರವರಿ 11 ರ ಭಾನುವಾರ ತಿ.ನರಸೀಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಎ ತರಗತಿಯಿಂದ 28 ಸೊಸೈಟಿಯಿಂದ 4 ಮಂದಿ ನಿರ್ದೇಶಕರು ಹಾಗೂ ಬಿ ತರಗತಿಯಿಂದ 5,630 ಸದಸ್ಯರ ಪೈಕಿ 8 ನಿರ್ದೇಶಕರ ಸ್ಥಾನಗಳಿಗೆ ಆಯ್ಕೆ ನಡೆಯಬೇಕಿದೆ ಎಂದರು.
ಇದೇ ವೇಳೆ ಎ ತರಗತಿಯಿಂದ ಗದ್ದೆಮೋಳೆ ಹೊನ್ನನಾಯಕ, ಮುಸುವಿನ ಕೊಪ್ಪಲು ಶಿವರಾಂಸ್ಪರ್ಧೆಗೆ ಆಕಾಂಕ್ಷಿಗಳಾದರೆ,ಬಿ ತರಗತಿಯಿಂದ ಬಿ.ವೀರಭದ್ರಪ್ಪ, ಷಡಕ್ಷರ ಸ್ವಾಮಿ, ಟಿ.ಎಂ.ನಂಜುಂಡ ಸ್ವಾಮಿ, ಮರಿಗೌಡ, ತುಂಬಲ ಶಿವಸ್ವಾಮಿ, ಹಿರಿಯೂರು ನವೀನ್ ಸ್ಪರ್ಧಿಸಲು ಆಕಾಂಕ್ಷಿಗಳಾಗಿ ಹೆಸರು ನೋಂದಾಯಿಸಿಕೊಂಡರು. ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜೇಗೌಡ, ಹಿಂದುಳಿದ ವರ್ಗಗಳ ಅಧ್ಯಕ್ಷ ಎ.ಎನ್.ಸ್ವಾಮಿ, ಚೌಹಳ್ಳಿ ಮಹಾದೇ ವಪ್ಪ, ಶೇಷಾದ್ರಿ, ಲೋಕೇಶ್, ಶಿವಸ್ವಾಮಿ, ಕುಮಾರ ಸ್ವಾಮಿ, ರಾಮಲಿಂಗೇಗೌಡ, ಉಕ್ಕಲಗೆರೆ ಬಸವಣ್ಣ, ಎನ್. ಅನಿಲ್ ಕುಮಾರ್, ಧನಂಜಯ, ಪರಶಿವಮೂರ್ತಿ, ರಾಜು, ಪುರಸಭಾ ಮಾಜಿ ಅಧ್ಯಕ್ಷ ಸಿದ್ದೇಗೌಡ, ಜ್ಞಾನಪ್ರಕಾಶ್, ಅತ್ತಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಆಕಾಂಕ್ಷಿಗಳು, ಕಾರ್ಯಕರ್ತರು ಹಾಜರಿದ್ದರು.