ಕಲಬುರಗಿ : ದಲಿತ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಆರೋಪದ ಮೇರೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಿಪಾಯಿ ಹುದ್ದೆಯ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಭೌತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಿಪಾಯಿ ಹುದ್ದೆಯ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯಕುಮಾರ ಕಡಗಂಚಿ ವಜಾಗೊಂಡ ಸಿಬ್ಬಂದಿ ಎಂದು ತಿಳಿದುಬಂದಿದೆ.ಎಂ.ಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ, ಅಶ್ಲೀಲ ಪದಗಳಿಂದ ನಿಂದನೆ ಮಾಡುವುದು, ಜಾತಿಯನ್ನು ಗುರಿಯಾಗಿಸಿ ಹೀಯಾಳಿಸುವುದು ಹಾಗೂ ಜೀವ ಬೆದರಿಕೆ ಹಾಕಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ವಿದ್ಯಾರ್ಥಿನಿಯ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಆರೋಪಿಯನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವರು ಆದೇಶ ಹೊರಡಿಸಿದ್ದಾರೆ.ಈ ಕುರಿತು ವಿದ್ಯಾರ್ಥಿನಿ ಕಳೆದ ಒಂದು ವರ್ಷದಿಂದ ಆರೋಪಿ ವಿಜಯಕುಮಾರ್ ನನ್ನ ಬಳಿ ಬಂದು ಮೈಗೆ ತಾಗಿಕೊಂಡು ನಿಲ್ಲುವುದು, ನನ್ನ ದೇಹದ ಬಗ್ಗೆ ಮಾತನಾಡುವುದು ಮಾಡುತ್ತಿದ್ದ. ನನಗೆ ಗೊತ್ತಿಲ್ಲದಂತೆ ವಿಡಿಯೊ ಮಾಡಿ ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ತನ್ನ ಗಮನಕ್ಕೆ ತಂದ ಬಳಿಕವೇ ತರಗತಿಯಿಂದ ಹೊರಗೆ ಹೋಗಬೇಕು ಎಂದು ತಾಕೀತು ಮಾಡುತ್ತಿದ್ದ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದೆ.ವಿಜಯಕುಮಾರ್ ತನಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಬಗ್ಗೆ ವಿಭಾಗ ಮುಖ್ಯಸ್ಥರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿನಿ ಕುಲಸಚಿವರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅವರು ವಿಜಯಕುಮಾರನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದರು. ಅಲ್ಲದೇ, ವಿಭಾಗದ ಸಿಬ್ಬಂದಿ ವಿರುದ್ದ ದುರ್ನಡತೆಯ ದೂರು ಬಂದರೂ ಕ್ರಮ ಏಕೆ ಕೈಗೊಂಡಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಸಣ್ಣಕ್ಕಿ ಅವರಿಗೆ ಸೂಚನೆ ನೀಡಿದ್ದಾರೆ.



