ಬೆಂಗಳೂರು: ಮೈ ಸ್ಮೈಲ್ ಎಂದಾಗ ನಿಮಗೆಲ್ಲ ಏನು ನೆನಪಾಗಿರುತ್ತದೆ. ನನ್ನ ಪ್ರಕಾರ ಖುಷಿ, ಸಂತೋಷ ಇರಬಹುದು. ಇಲ್ಲಿ ನಾನು ನಿಮಗೆ ಹೇಳುತ್ತಿರುವ ವಿಷಯವೂ ಕೂಡ ನಿಮ್ಮ ಮನಸ್ಸನ್ನು ಸಂತೋಷಪಡಿಸಬಹುದು ಅಥವಾ ಆನಂದಭಾಷ್ಪವೂ ಬರಬಹುದು.
`ಆಶ್ರಮ’ ಎಂದರೆ ನಿಮಗೆಲ್ಲ ನೆನಪಾಗುವುದು ಯಾರು ಇಲ್ಲದವರಿಗೆ ಆಶ್ರಯ ನೀಡುವ ಸ್ಥಳವೆಂದು.
ಹೌದು ಗೆಳೆಯರೇ, ಇದು ಕೂಡ ಒಂದು ಅನಾಥಾಶ್ರಮ ಮತ್ತು ಎನ್ ಜಿ ಒ ಆಗಿರುತ್ತದೆ. ಶ್ರೀಯುತ ಡಾ. ವಿಷ್ಣುವರ್ಧನ್ ಅವರ ನೆನಪಿನಲ್ಲಿ ಈ ಆಶ್ರಮವನ್ನು ಶ್ರೀಯುತ ರಾಘು ಮತ್ತು ಅವರ ಪತ್ನಿ ಆರಂಭ ಮಾಡಿರುತ್ತಾರೆ. ರಾಘು ಅವರು ಯಲಹಂಕದ ಮಾರುತಿ ನಗರದ ನಿವಾಸಿಯಾಗಿದ್ದು, ಈ ಆಶ್ರಮದಲ್ಲಿ ಅಪ್ಪ, ಅಮ್ಮ ಇಲ್ಲದ ಮಕ್ಕಳಿಗೆ ಮತ್ತು ಅಪ್ಪ ಅಮ್ಮ ಇದ್ದು ಕೂಡ ಅನಾಥರಾದ ಮಕ್ಕಳಿಗೆ ಇವರೇ ಅಪ್ಪ ಅಮ್ಮ ಹಾಗೂ ಇಡೀ ಕುಟುಂಬವೇ ಆಗಿ ಆ ಮಕ್ಕಳನ್ನು ಮಮತೆ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿರುವ ಸುಂದರ ನಿಷ್ಕಲ್ಮಶ ಜೋಡಿಯಾಗಿರುತ್ತಾರೆ.
ಅಲ್ಲಿರುವ ಮಕ್ಕಳನ್ನು ನಾವು ದೇವರ ಮಕ್ಕಳೆಂದು ಕರೆದರೆ ಬಹುಶಃ ರಾಘು ಮತ್ತು ಅವರ ಪತ್ನಿಯನ್ನು ದೇವರೇ ಎಂದರೆ ಸುಳ್ಳಾಗುವುದಿಲ್ಲ. ಇವರು ಅಲ್ಲಿರುವ ಮಕ್ಕಳಿಗೆ ಅನ್ನ ನೀಡಿ `ಅನ್ನದಾತ’, ಆಶ್ರಯ ನೀಡಿ `ಆಶ್ರಯದಾತ’, ವಿದ್ಯೆ ನೀಡಿ `ಜ್ಞಾನದಾತ’ಆಗಿ ಮಕ್ಕಳ ಜೀವನ ರೂಪಿಸುವುದರಲ್ಲಿ ಸಹಾಯ ಮಾಡಿರುತ್ತಾರೆ.
ಇವರು ಮೊದಲಿಗೆ ತಮ್ಮ ಸ್ವಲ್ಪ ಹಣದಿಂದ ಈ ಆಶ್ರಮ ಮತ್ತು ಎನ್ ಜಿ ಒ ಶುರು ಮಾಡಿರುತ್ತಾರೆ. ತದನಂತರ ಇವರಿಗೆ ಸಮಾಜ ಸೇವೆಯಲ್ಲಿ ಇರುವ ಹಂಬಲ ಉತ್ಸಾಹ, ಮಕ್ಕಳ ಮೇಲಿರುವ ಮಮತೆ ವಾತ್ಸಲ್ಯವನ್ನು ನೋಡಿ ದಾನಿಗಳು ಕೂಡ ಕೈಜೋಡಿಸಿರುತ್ತಾರೆ. ಹಾಗೆಯೇ ಇವರ ಸೇವೆ ಆಶ್ರಮಕ್ಕೆ ಮಾತ್ರ ಸೀಮಿತವಾಗದೆ ಅವರ ಎನ್ ಜಿ ಒ ತಂಡದ ಸಹಾಯದಿಂದ ಕೋವಿಡ್ ಸಮಯದಲ್ಲಿ ಹಸಿವಿನಿಂದ ಬಳಲುತ್ತಿರುವವರಿಗೆ ಊಟ ನೀಡಿ,ಅನಾಥವಾಗಿ ಬಿದ್ದಿದ್ದ ಶವಗಳ ಶವಸಂಸ್ಕಾರ ಮಾಡಿರುತ್ತಾರೆ,
ರಾಘು ಮತ್ತು ಅವರ ಪತ್ನಿಯ ಕೂಸಿಗೆ ಅಂದರೆ ಮೈ ಸ್ಮೈಲ್ ಆಶ್ರಮ ಮತ್ತು ಎನ್ ಜಿಒಗೆ ಏಳು ವರ್ಷಗಳು ತುಂಬಿ ಇದಕ್ಕೆ `ನನ್ನ ನಗು’ ಎಂಬ ಶೀರ್ಷಿಕೆ ನೀಡಿ ಡಾ. ಅಂಬೇಡ್ಕರ್ ಭವನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು. ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಡಾ. ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕಾಗಿ ನೀಡಿರುವ ಕೊಡುಗೆಯನ್ನು ಸ್ಮರಿಸಲಾಯಿತು. ಚಿಕ್ಕ ಮಕ್ಕಳಿಂದ ನೃತ್ಯ ಹಾಗೂ ಗಾಯಕರಿಂದ ಗಾಯನ ಹಾಗೂ ಹಲವು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಗಣ್ಯರಿಂದ ನುಡಿ ಮುತ್ತುಗಳು, ಲಕ್ಕಿ ಡ್ರಾ ಬಹುಮಾನ ವಿತರಣೆಗಳು ಕೂಡ ನಡೆದವು. ಸಮಾಜ ಸೇವಕರು ಮತ್ತು ಕಲಾವಿದವರಿಗೆ ಗೌರವಾನ್ವಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕರು ಹಾಗೂ ರಾಜ್ಯ ಭಾಜಪ ಅಧ್ಯಕ್ಷರಾದ ವಿಜಯೇಂದ್ರರವರು, ಯಲಹಂಕ ಶಾಸಕ ವಿಶ್ವನಾಥ್, ಕನ್ನಡ ಚಲನಚಿತ್ರ ಹಿರಿಯ ನಟ ನಟಿಯರಾದ ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ಅಂಜಲಿ, ಗುರುರಾಜ್ ಹೊಸಕಟ್ಟಿ, ಸಾಹಿತಿ ನಾಗೇಂದ್ರ ಪ್ರಸಾದ್, ವಿಷ್ಣು ಸೇವಾ ಸಮಿತಿಯ ಅಧ್ಯಕ್ಷರಾಗಿರುವ ವೀರಕಾಪುತ್ರ ಶ್ರೀನಿವಾಸ್, ಡಾ ವೇಣುಗೋಪಾಲ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.
ಏಳನೇ ವರ್ಷದ ವಾರ್ಷಿಕೋತ್ಸವಕ್ಕೆ ಕೇಂಬ್ರಿಡ್ಜ್ ತಾಂತ್ರಿಕ ವಿದ್ಯಾನಿಲಯ ನಾರ್ತ್ ಕ್ಯಾಂಪಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕಿಯಾದ ಶ್ರೀಮತಿ ಕವಿತಾ ಮೇಡಂ ಸಹಾಯದಿಂದ ಸ್ವಯಂಸೇವಕರಾಗಿ ಆಗಮಿಸಿದ್ದರು.
ಹಾಗೆಯೇ ಇವರುಗಳು ಅಲ್ಲಿರುವ ದೇವರ ಮಕ್ಕಳಿಗೆ ತಮ್ಮ ಕೈಲಾದ ಸಹಾಯವನ್ನು ಕೂಡ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯರಿಗೂ ಹಾಗೂ ಮಕ್ಕಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೇಂಬ್ರಿಡ್ಜ್ ವಿದ್ಯಾನಿಲಯದ ಮಕ್ಕಳು ಊಟ ಬಡಿಸಿದರು, ಪುಷ್ಪಾರ್ಚನೆಗೆ ಪುಷ್ಪವನ್ನು ಸಿದ್ಧಪಡಿಸಿದ್ದರು, ಮತ್ತು ಭವನದ ಮುಂಭಾಗದಲ್ಲಿ ಬರುತ್ತಿರುವ ಗಣ್ಯರಿಗೆ ಪುಷ್ಪಗಳ ಮೂಲಕ ಸ್ವಾಗತಿಸಿದರು. ಇನ್ನು ಹಲವು ಸಹಾಯವನ್ನು ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಕೇಂಬ್ರಿಡ್ಜ್ ಮಕ್ಕಳ ಅಳಿಲು ಸೇವೆಯನ್ನು ನೆನೆದು ಅವರಿಗೆ ಪದಕಗಳನ್ನು ನೀಡಿ ಗೌರವಿಸಲಾಯಿತು ಮತ್ತು ಕೇಂಬ್ರಿಡ್ಜ್ ಕಾಲೇಜಿಗೆ ಡಾ. ವಿಷ್ಣುವರ್ಧನ್ ಅವರ ನೆನಪಿನ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.