ಹೊಸಕೋಟೆ: ನಗರದ ತಮ್ಮೇಗೌಡ ಬಡಾವಣೆಯ ಒಂದನೇ ಮುಖ್ಯ ರಸ್ತೆಯ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಸಂಪರ್ಕಿಸುವ ತಿರುವಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿ ಕಾಮಗಾರಿಯಿಂದಾಗಿ ಕೊಳಚೆ ನೀರು ರಸ್ತೆಗೆ ಹರಿದುಬರುತ್ತಿದ್ದು ಪಾದಚಾರಿಗಳು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿಯನ್ನು ತರಕಾರಿಗಳನ್ನು ಸಾಗಣೆ ಮಾಡುವಂತಹ ಅಂಗಡಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ ಚರಂಡಿ ನೀರಿನಿಂದ ಪಾರಾಗಲು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣದಿಂದಾಗಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಅತಿ ವೇಗವಾಗಿ ಚಲಿಸುವುದೇ ಅಲ್ಲದೆ ಬಹಳಷ್ಟು ಸಂದರ್ಭಗಳಲ್ಲಿ ಪಾದಚಾರಿಗಳ ಮೇಲೆ ಕೊಳಚೆ ನೀರು ಎರಚುವುದು ಸಹ ಸಾಮಾನ್ಯವಾಗಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ನಗರಕ್ಕೆ ಸಂಚರಿಸುವ ಬಹಳಷ್ಟು ಬಿಎಂಟಿಸಿ ಬಸ್ಗಳು ಬಸ್ ಸ್ಟಾಂಡಿಗೆ ತೆರಳಲು ಇದೇ ರಸ್ತೆಯನ್ನು ಬಳಸುವುದರಿಂದ ಸಂಚಾರದ ದಟ್ಟಣೆ ಹೆಚ್ಚಾಗಿದೆ.ರಾಷ್ಟ್ರೀಯ ಹೆದ್ದಾರಿಯ ಅರ್ಧದಷ್ಟು ಭಾಗದಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ಪಾದಚಾರಿಗಳು ವಿಧಿಯಿಲ್ಲದೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಭೀತಿಯಿಂದಲೇ ರಸ್ತೆಯಲ್ಲಿ ಓಡಾಡಬೇಕಾಗಿದೆ.
ಈ ಸಮಸ್ಯೆಯು ಸುಮಾರು 2 ವರ್ಷಗಳಿಂದ ಇದ್ದಾಗ್ಯೂ ಸಹ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಇದ್ದಾರೆ. ಸುಮಾರು 6 ತಿಂಗಳ ಹಿಂದೆ ನಡೆದ ರಾಜ್ಯ ಮಟ್ಟದ ಹಿರಿಯ ಕ್ರೀಡಾಕೂಟದ ಸಂದರ್ಭದಲ್ಲಿ ಕ್ರೀಡಾಪಟುವೊಬ್ಬರು ಓಡಾಡುವ ಸಂದರ್ಭದಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದರು.
ಇತ್ತೀಚೆಗೆ ಸಿಮೆಂಟ್ ಕಾಂಕ್ರೀಟ್ ಚರಂಡಿ ನಿರ್ಮಿಸಿದ್ದು ಸಮಸ್ಯೆ ಬಗೆಹರಿಯಬಹುದು ಎಂಬ ವಿಶ್ವಾಸವಿದ್ದಿತು. ಆದರೆ ಕೆಲವೇ ದಿನಗಳಲ್ಲಿ ಅದು ಮರಿಚಿಕೆಯಾಗಿದೆ.ಈಗಲಾದರೂ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸಮಸ್ಯೆಯನ್ನು ಬಗೆಹರಿಸುವರೆ ಎಂದು ಕಾದುನೋಡಬೇಕಾಗಿದೆ.