ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಉದ್ಘಾಟನೆ
ಯಲಹಂಕ: ಭಾರತದ ಬಗ್ಗೆ, ಭಾರತೀಯರ ಬಗ್ಗೆ ಯಾರು ಯಾವ ರೀತಿಯಲ್ಲೇ ವಿಶ್ಲೇಷಣೆ ಮಾಡಲಿ, ಇತ್ತೀಚಿನ ಆಧುನಿಕ ಯುಗದಲ್ಲಿ ಭಾರತೀಯರು ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿನಿಸ್ಸಂಶಯವಾಗಿ ಸ್ಪರ್ಧೆ ಒಡ್ಡುತ್ತಿದ್ದಾರೆ ಎಂದು ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ನ ಟ್ರಸ್ಟಿ, ಕ್ಷಣ ಹೊತ್ತ ಅಣಿಮುತ್ತು ಖ್ಯಾತಿಯ ಅಂಕಣಕಾರ ಎಸ್ ಷಡಕ್ಷರಿ ಯವರು ಅಭಿಪ್ರಾಯಪಟ್ಟರು.
ಯಲಹಂಕ ಕ್ಷೇತ್ರದ ಹೊನ್ನೇನಹಳ್ಳಿ ಸಮೀಪ ಇರುವ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅತ್ಯಾಧುನಿಕ ಸ್ಟೆಮ್, ಖಗೋಳ ವಿಜ್ಞಾನ, ತೋಟಗಾರಿಕೆ, ಪ್ರದರ್ಶನ ಮತ್ತು ದೃಶ್ಯ ಕಲೆಗಳ ಹೊಸ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಇತ್ತೀಚಿನ ದಿನಗಳಲ್ಲಿ ಭಾರತೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಿದ್ಧಾಂತ, ಪ್ರಯೋಗ ಮತ್ತು ಡಿಜಿಟಲ್ ಕಲಿಕೆಗೆ ಅವಕಾಶ ಕಲ್ಪಿಸಿರುವ ಜಾಗತಿಕ ಮಟ್ಟದ ಶಿಕ್ಷಣ ನೀಡುವ ಹಲವು ಶಾಲೆಗಳಿರುವುದು ನಿಜಕ್ಕೂ ಸಂತೋಷದ ಸಂಗತಿ.
ಕಲಿಕಾ ಮಾದರಿ, ಕಲಿಕೆಗೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ಸಾಧನಗಳು ನಿಜಕ್ಕೂ ಶೈಕ್ಷಣಿಕ ಸಾಧನೆಗೆ ಇಂಬು ನೀಡುವಂತಿದ್ದು ಕಲಿಕೆಯನ್ನು ಸರಳಗೊಳಿಸಿವೆ. ನಮ್ಮ ಮಕ್ಕಳಿಗೆ ಇಂತಹದ್ದೊಂದು ಸುವರ್ಣಾವಕಾಶ ದೊರೆತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಖ್ಯಾತ ಚಿತ್ರನಟಿ ಅಮೂಲ್ಯ ಮಾತನಾಡಿ ‘ನಾನು ವ್ಯಾಸಂಗ ಮಾಡುವ ವೇಳೆಯಲ್ಲಿ ಗಣಿತ ಸೇರಿದಂತೆ ಎಲ್ಲಾ ವಿಷಯಗಳನ್ನು ಗಟ್ಟು ಹೊಡೆಯುತ್ತಿದ್ದೆ, ಅದರ ನೈಜ ಅರ್ಥ ನನಗೆ ತಿಳಿದಿರುತ್ತಿರಲಿಲ್ಲ, ಆದರೆ ಆರ್ಕಿಡ್ ಶಾಲೆಗೆ ಇಂದು ಭೇಟಿ ನೀಡಿ ಇಲ್ಲಿನ ಶಿಕ್ಷಣ ಕ್ರಮ, ಮಕ್ಕಳ ಕಲಿಕೆಗೆ ಅವರು ಬಳಸುವ ಅತ್ಯಾಧುನಿಕ ಸಾಧನಗಳು, ಕಲೆ, ವಿಜ್ಞಾನ, ಗಣಿತ, ಸಂಗೀತ, ನಮ್ಮ ಪಾರಂಪರಿಕ ವೃತ್ತಿಗಳು ಸೇರಿದಂತೆ ಪ್ರತಿ ವಿಷಯದ ಕಲಿಕೆಗೂ ಪ್ರಯೋಗದ ಮಾದರಿಯನ್ನು ಅಳವಡಿಸಿರುವುದನ್ನು ನೋಡಿ ನಿಬ್ಬೆರಗಾಗುವಂತಾಯಿತು, ಜತೆಗೆ ನಾವು ಇಂತಹ ಚಿನ್ನದಂತಹ ಅವಕಾಶದಿಂದ ವಂಚಿತರಾದ ಬಗ್ಗೆ ಕೊಂಚ ಬೇಸರವೂ ಆಯ್ತು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ನ ಉಪಾಧ್ಯಕ್ಷೆ ಡಾ.ವೇದಾ ಬೈಸಾನಿ ಮಾತನಾಡಿ ‘ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ) 2020 ಮತ್ತು ಹೊಸದಾಗಿ ಪ್ರಾರಂಭಿಸಿರುವ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (ಎನ್ ಸಿ ಎಫ್) 2023, ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಪ್ರಮುಖ ಕಾರ್ಯತಂತ್ರವಾಗಿ ಪ್ರಯೋಗಾಲಯ ಆಧಾರಿತ ಕಲಿಕೆಗೆ ಹೆಚ್ಚು ಮಹತ್ವ ನೀಡಿದ್ದೇವೆ.
ಈ ವಿಧಾನವು ಉಪನ್ಯಾಸ ಆಧಾರಿತ ಸಾಂಪ್ರದಾಯಿಕ ಬೋಧನೆಯಿಂದ ದೂರ ಸರಿದು, ಚಟುವಟಿಕೆ, ಪ್ರಯೋಗ ಮತ್ತು ಪರಿಶೋಧನೆಯ ನವೀನ ವಿಧಾನದ ಮೂಲಕ ಮಕ್ಕಳಿಗೆ ಕಲಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಹೋಮ್ ಲೇನ್ ಸಂಸ್ಥೆಯ ಸಹ ಸಂಸ್ಥಾಪಕ, ಸಿಓಓ ತನುಜ್ ಚೌಧರಿ, ಸ್ಟೆಮ್ ಅಕ್ಯಾಡೆಮಿ ಉಪಾಧ್ಯಕ್ಷೆ ಜಿನ್ನಿ ಅಹುಜಾ, ಕಲಾ ಅಕ್ಯಾಡೆಮಿ ಉಪಾಧ್ಯಕ್ಷೆ ಮಾಧುರಿ ಸಗಾಲೆ ಸೇರಿದಂತೆ ಇನ್ನಿತರರಿದ್ದರು.