ರಾಮನಗರ: ದುಬೈನಲ್ಲಿ ನಡೆದ 6 ರಿಂದ 8ವರ್ಷದೊಳಗಿನ ಮಕ್ಕಳ ಅಂತಾರಾಷ್ಟ್ರೀಯ ಮಟ್ಟದ ಟೇಕ್ವಾಂಡೋ ಸ್ಪಾರಿಂಗ್ ಮತ್ತು ಪ್ಯಾಟರ್ನ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಮನಗರದ ಶಾನ್ವಿ ಸತೀಶ್ ಒಂದು ಚಿನ್ನ, ಎರಡು ಬೆಳ್ಳಿ ಪದಕ ಗಳಿಸಿದ್ದಾರೆ.
ರಾಮನಗರದ ನೇಟಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಶಾನ್ವಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ರಾಮನಗರ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಅವರ ಪುತ್ರಿ. ಈ ಸ್ಪರ್ಧೆಯಲ್ಲಿ 6 ರಾಷ್ಟ್ರದ 250 ಸ್ಪರ್ಧಿಗಳು ಭಾಗಿಯಾಗಿದ್ದರು. ಇದರಲ್ಲಿ ಭಾರತ ದೇಶದಿಂದ 28 ಮಂದಿ ಸ್ಪರ್ಧಿಗಳು ಇದ್ದರು.
ಯುಎಇ, ಕಜಾಕಿಸ್ತಾನ, ಬಾಂಗ್ಲಾದೇಶ, ರಷ್ಯಾ ಮತ್ತು ಉಜೇಕಿಸ್ತಾನ್ ರಾಷ್ಟ್ರದ ಪ್ರತಿಸ್ಪರ್ಧಿಗಳು ಭಾಗವಹಿಸಿದ್ದರು.
ಶಾನ್ವಿಗೆ ಅಂತಿಮ ಪಂದ್ಯದಲ್ಲಿ ಯುಎಇ ಸ್ಪರ್ದಾಳು ಎದುರಾಳಿಯಾಗಿದ್ದರು. ಕೊನೆಯ ಸ್ಪಾರಿಂಗ್ ಪಂದ್ಯದಲ್ಲಿ ಶಾನ್ವಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.