ಬೆಂಗಳೂರು: ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯಲ್ಲಿ ಲೋಪದೋಷವಿದೆ. ರಾಜ್ಯದಲ್ಲಿ ಸರ್ಕಾರ ನಡೆಸುವವರು ಬಿಗಿಯಾದ ಆಡಳಿತ ನಡೆಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಸಡಿಲಿಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ನೇಹಾ ಪ್ರಕರಣದ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ ಅಂದುಕೊಂಡಿದ್ದೆವು ಆದ್ರೆ ಪೊಲೀಸ್ ಇಲಾಖೆ ಸಂಪೂರ್ಣ ಬಿಗಿಯನ್ನ ಕಳೆದುಕೊಂಡಿದೆ ಎಂದು ದೂರಿದರು.
ಇಂತಹ ಪ್ರಕರಣಗಳಿಗೆ ಸಿಎಂ ಹಾಗೂ ಗೃಹ ಇಲಾಖೆಯೇ ಕಾರಣ ಆಗಿದೆ ಎಂದು ಆರೋಪಿಸಿದರು.
ನಿನ್ನೆ ಹತ್ಯೆಯಾದ ಅಂಜಲಿ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ರೂ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಇದಕ್ಕೆ ಸರ್ಕಾರದ ಆಡಳಿತದ ಸಂಪೂರ್ಣ ವೈಫಲ್ಯವೇ ಕಾರಣ ಎಂದು ಕಿಡಿಕಾರಿದರು.ಕಾಂಗ್ರೆಸ್ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗಬಹುದು ಎಂದು ಭವಿಷ್ಯ ನುಡಿದ ಶೆಟ್ಟರ್, ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಜಾಸ್ತಿ ಇದೆ.
ಇದು ಸರ್ಕಾರದ ಪತನಕ್ಕೂ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ರಾಜ್ಯ ಸರ್ಕಾರ ಬೀಳುತ್ತದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ನಾನು ಮೂರು ತಿಂಗಳ ಹಿಂದೆಯೇ ಹೇಳಿದ್ದೇನೆ. ಬಿಜೆಪಿ ಆಪರೇಶನ್ ಕಮಲ ಮಾಡೋ ಅವಶ್ಯಕತೆ ಇಲ್ಲ ಕಾಂಗ್ರೆಸ್ ನವರ ಕಚ್ಚಾಟದಿಂದಲೇ ಸರ್ಕಾರ ಬಿದ್ದು ಹೋಗಬಹುದು ಎಂದಿದ್ದಾರೆ.
ಬಿಜೆಪಿ ಆಪರೇಶನ್ ಕಮಲ ಮಾಡೋ ಅವಶ್ಯಕತೆ ಇಲ್ಲ. ಸಿಎಂ ಡಿಸಿಎಂ ನಡುವೆ ಸಮನ್ವಯ ಕೊರತೆ ಇದೆ. ನಮ್ಮವರು ಯಾರೂ ಹೋಗಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.ಗಟ್ಟಿ ಮುಟ್ಟಾಗಿದಾರೆ ಎಂದರೆ ಏನೋ ಇದೆ ಅರ್ಥ. ಈ ಹಿಂದೆ 17 ಜನ ಹೋದಾಗ ಸಿದ್ದರಾಮಯ್ಯ ಏನು ಹೇಳಿದ್ರು ..? ನೀವೇ ಹೇಳಿ ಎಂದು ಪ್ರಶ್ನೆ ಮಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಹೀಗಾಗಿ ನಾವು ಸಿಬಿಐಗೆ ವರ್ಗಾವಣೆ ಮಾಡಿ ಅಂತೀದಿವಿ. ಆದರೆ ಇದರಲ್ಲಿ ರಾಜರಾಕರಣ ಮಾಡಬಾರದು ಎಂದರು.ಬೆಳಗಾವಿಯಲ್ಲಿ ನಾನು ಗೆದ್ದು ಬರ್ತೀನಿ. ಹಣದ ಹೊಳೆ ಹರಿದ್ರೂ ನಾನು ಗೆದ್ದು ಬರ್ತೀನಿ ಎಂದ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ ಅವರು, ಒಂದು ವಾರಗಳ ಕಾಲ ನಾನು ದೆಹಲಿ ಪ್ರಚಾರಕ್ಕೆ ಹೋಗತ್ತಿದ್ದೇನೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಲಿದ್ದೇನೆ ಎಂದರು.