ಶಿಡ್ಲಘಟ್ಟ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯವನ್ನು ಕಾಪಾಡಲು ಪೊಲೀಸ್ ಇಲಾಖೆ ದಿನದ 24 ಗಂಟೆ ಶ್ರಮಿಸುತ್ತದೆ. ಹೊಸ ವರ್ಷಾಚರಣೆ ಪ್ರತಿಯೊಬ್ಬರಲ್ಲಿಯೂ ಸಂತೋಷ ಮತ್ತು ನೆಮ್ಮದಿಯನ್ನು ತರಲಿ. ಆದರೆ ಬೈಕ್ ವೀಲಿಂಗ್ ಮಾಡುವುದು, ಸಾರ್ವಜನಿಕವಾಗಿ ಪಟಾಕಿ ಹಚ್ಚುವುದು, ಸಂತೋಷಕೂಟಗಳನ್ನು ಏರ್ಪಡಿಸುವುದು ಮಾಡದೆ ನಿಮ್ಮ ನಿಮ್ಮ ಮನೆಗಳಲ್ಲಿ ಹೊಸ ವರ್ಷಾಚರಣೆ ಆಚರಿಸಿಕೊಳ್ಳಿ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಕರೆ ನೀಡಿದ್ದಾರೆ.
ಅವರು ಇಂದು ನಗರದಲ್ಲಿ ಹೊಸ ವರ್ಷಾಚರಣೆ ಮುನ್ನಾ ದಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ಮತ್ತು ವಿಚಾರ ವಿನಿಮಯ ಹಂಚಿಕೊಂಡು ಮಾತನಾಡುತ್ತಿದ್ದರು.ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಬದುಕನ್ನು ಸುಖ ಮತ್ತು ಸಂತೋಷವಾಗಿ ಕಳೆಯಲು ಇಚ್ಛಿಸುತ್ತಾನೆ. ಆದರೆ ನಮ್ಮ ಸಂತೋಷ ಇನ್ನೊಬ್ಬರಿಗೆ ದುಃಖವನ್ನು ಕೊಡಬಾರದು. ನಮ್ಮ ಸುಖಕ್ಕಾಗಿ ಇನ್ನೊಬ್ಬರಿಗೆ ಕಷ್ಟ ಕೊಡಬಾರದು.
ಕಾನೂನುಪರಿಪಾಲನೆ ಮಾಡುವ ಪೊಲೀಸರು ಸಹ ನಿಮ್ಮೊಂದಿಗೆ ದಿನದ 24 ಗಂಟೆ ಜೊತೆಯಲ್ಲಿ ಇರುತ್ತಾರೆ. ಕರ್ತವ್ಯ ಪಾಲನೆ ಮಾಡುವ ಪೊಲೀಸರನ್ನು ಗೌರವಿಸಿ ಸಮಾಜವನ್ನು ಪ್ರೀತಿಸಿ. ಯುವಕರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ದ್ವಿಚಕ್ರ ವಾಹನಗಳನ್ನು ವೇಗವಾಗಿ ಚಲಾಯಿಸುವುದು ಮತ್ತು ವೀಲಿಂಗ್ ಮಾಡುವುದುಅಪರಾಧವಾಗುತ್ತದೆ.
ಅಲ್ಲದೆ ಆಯ ತಪ್ಪಿ ಬಿದ್ದು ಪ್ರಾಣಾಪಾಯಗಳು ಉಂಟಾಗುತ್ತದೆ.ನಿಮ್ಮ ಕ್ಷಣದ ಸಂತೋಷಕ್ಕೆ ಇಡೀ ಕುಟುಂಬವನ್ನು ದುಃಖದಲ್ಲಿ ಮುಳುಗಿಸಬೇಡಿ ಎಂದು ಯುವಕರಿಗೆ ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಕರೆ ನೀಡಿದರು.ನಗರದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ವಾದ್ಯಗೋಷ್ಠಿಗಳನ್ನಾಗಲಿ, ಪಾನಗೋಷ್ಟಿಗಳನ್ನಾಗಲಿ ಮಾಡುವಂತಿಲ್ಲ. ಕಾನೂನು ಉಲ್ಲಂಘಿಸಿ ಅಶಾಂತಿ ಉಂಟುಮಾಡುವ ರೀತಿಯಲ್ಲಿ ವರ್ತಿಸಿದರೆ ನಿರ್ದಾಕ್ಷಿಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.