ಶಿಡ್ಲಘಟ್ಟ: ನಾಸಾ ಬಾಹ್ಯಾಕಾಶ ಕೇಂದ್ರವನ್ನು ಮೀರಿದ ಹಲವಾರು ಹೊಸ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ಮಾಡುವ ಮೂಲಕ ಭಾರತೀಯ ಮೂಲದ ಇಸ್ರೋ ಬಾಹ್ಯಾಕಾದ ಸಂಶೋಧನಾ ಕೇಂದ್ರ ವಿಶ್ವದ ಗಮನವನ್ನು ಸೆಳೆದಿದೆ. ಶಿಡ್ಲಘಟ್ಟ ನಗರದ ಎ ಆರ್ ಎಂ ಶಾಲೆಯ ವಿದ್ಯಾರ್ಥಿಗಳು ಇಂತಹ ಪ್ರತಿಷ್ಠಿತ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ವೈಜ್ಞಾನಿಕ ಅಧ್ಯಯನವನ್ನು ಮತ್ತು ಜ್ಞಾನವನ್ನು ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ಗಳಿಸಿಕೊಂಡಿದ್ದಾರೆ.
ಭಾರತದ ಹೆಮ್ಮೆಯ ಇಸ್ರೋ ಬಾಹ್ಯಾಕಾಶ ಕೇಂದ್ರಕ್ಕೆ ಇತ್ತೀಚೆಗೆ ನಡೆದ ಚಂದ್ರಯಾನ-3 ಮತ್ತು ಆದಿತ್ಯ- ಎಲ್-1 ಯಾನಗಳು ವಿಶ್ವ ಖ್ಯಾತಿಯನ್ನು ತಂದುಕೊಟ್ಟಿವೆ. ಚಂದ್ರಯಾನ ದಲ್ಲಿ ಸಾಕಷ್ಟು ಗ್ರಾಮೀಣ ವಿಜ್ಞಾನಿಗಳು ತಮ್ಮ ಪ್ರತಿಭೆಯನ್ನು ದಾರಿಯೆರಿದಿದ್ದಾರೆ. ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಆರ್.ಅನಂತ ಕೃಷ್ಣ ಹಲವಾರು ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ಸಂಕಿರಣ ಮತ್ತು ಸಮಾವೇಶಗಳನ್ನು ಮಾಡುತ್ತಾ ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭೆಗಳನ್ನು ಸಮಾಜ ಮುಖಿಯಾಗಿ ಹೊರಗೆ ತರುತ್ತಿದ್ದಾರೆ.
ಇಂತಹ ಕಾರ್ಯದಲ್ಲಿ ಇಸ್ರೋ ಬಾಹ್ಯಾಕಾಶ ಸಂಸ್ಥೆಯಲ್ಲಿ ತಮಗಿರುವ ಪರಿಚಯ ಮತ್ತು ಸಂಪರ್ಕವನ್ನು ಬಳಸಿಕೊಂಡು ವಿಜ್ಞಾನಿಗಳನ್ನು ತಾಲೂಕಿನ ವಿವಿಧ ಶಾಲೆಗಳಿಗೆ ಕರೆಸಿ ಅವರಿಂದ ಉಪನ್ಯಾಸ ಮತ್ತು ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಕೊಡಿಸಿದ್ದಾರೆ. ಇತ್ತೀಚೆಗೆ ಡಾಲ್ಫಿನ್ ವಿದ್ಯಾ ಸಂಸ್ಥೆಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹ ಮಾಹಿತಿಯನ್ನು ನೀಡುವ ವಿಜ್ಞಾನ ವಾಹನವನ್ನು ಕರೆತಂದು ಜಿಲ್ಲೆಯಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದರು.
ಚಂದ್ರಯಾನದಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಯನ್ನು ಕರೆಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಇದೀಗ ಏ ಆರ್ ಎಂ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಇಸ್ರೋ ವಿದ್ಯಾ ಸಂಸ್ಥೆಗೆ ಕಳುಹಿಸಿಕೊಟ್ಟು ಅಲ್ಲಿನ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ಇಸ್ರೋ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರತ್ಯಕ್ಷ ವೀಕ್ಷಣೆಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದು ತಾಲೂಕಿನ ಹಿರಿಯರು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.