ಬೆಂಗಳೂರು: ಶೈಲೂಷಮ್ ಆರ್ಟ್ಸ್ & ಕ್ರಿಯೇಷನ್ಸ್(ರಿ) ಸಂಸ್ಥೆ ಕಳೆದ 13 ವರ್ಷಗಳಿಂದ ಶಾಸ್ತ್ರೀಯ ಸಂಗೀತ & ನೃತ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ. ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಹೆಸರುವಾಸಿಯಾಗಿದೆ.
“ಚಿಣ್ಣರ ಕಲರವ ” ಈ ಕಾರ್ಯಕ್ರಮವು ಇದುವರೆಗೂ 20 ಆವೃತ್ತಿಗಳನ್ನು ಪೂರೈಸಿ ಈಗ 21ನೇ ಆವೃತ್ತಿಯನ್ನು ನಗರದ ಕಲಾಗ್ರಾಮ ಸಭಾಂಗಣದಲ್ಲಿ 27ನೇ ಜನವರಿ 2024ರಂದು ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ಸಂಸ್ಥೆಗಳಿಂದ ಮಕ್ಕಳು ಭಾಗವಹಿಸಿದ್ದು, ಎಲ್ಲಾ ಪ್ರದರ್ಶನಗಳು ಪ್ರತ್ಯಕ್ಷ ವಾದ್ಯಪರಿಕರಗಳೊಂದಿಗೆ ಮಾಡಿದ್ದು ಮನಸೆಳೆಯಿತು. ಇಂತಹ ವಿಶೇಷ ಸರಣಿ ಮಾಡುತ್ತಿರುವುದು(ಚಿಣ್ಣರ ಕಲರವ) ದೇಶದಲ್ಲೇ ಮೊದಲ ಸಂಸ್ಥೆ ಇದಾಗಿದೆ.
ಪ್ರತ್ಯಕ್ಷ ವಾದ್ಯಪರೀಕರಗಳೊಂದಿಗೆ ಬೇರೆ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಡುವ ಪ್ರಯತ್ನ ಇದಾಗಿದೆ. ಈ ಸಂಸ್ಥೆಯ ರೂವಾರಿಗಳಾದ ವಿದ್ವಾನ್ ಅನಂತ್ ವಿಕ್ರಂ ಹಾಗು ಕಾರ್ಯದರ್ಶಿ ಶ್ರೀಮತಿ ಚೈತ್ರ ರವರ ಪರಿಕಲ್ಪನೆ ಇದಾಗಿದೆ.ಮುಖ್ಯ ಅತಿಥಿಗಳಾಗಿದ್ದ ಶ್ರೀ ಶಿವಕುಮಾರ ನಾಗರನವಿಲೆ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ಲೇಪಾಕ್ಷಿ ಸಂತೋಷ್ ರಾವ್ ರವರು ಮಾತನಾಡಿ, “ಇಂತಹ ವಿಶೇಷ ಪ್ರಯತ್ನಗಳಿಗೆ ಸರ್ಕಾರ ಹಾಗು ಇನ್ನಿತರ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು.
ಭರತನಾಟ್ಯ ಗುರುಗಳಾದ ಗುರು ವಿ. ಸೌಮ್ಯ , ವಿ. ಲತಾ ರಮೇಶ್, ಡಾ. ಸಿಂಧು ಮತ್ತು ವಿ. ಮೇಘನಾ ವೆಂಕಟ್ ಶಿಷ್ಯರು ಬಹಳ ಮಾನೋಜ್ಞ ಪ್ರದರ್ಶನಗಳನ್ನು ನೀಡಿ ಸಭಿಕರ ಮನ ಸೆಳೆದರು.ಅದರಲ್ಲೂ ಶ್ರೀ ಅನಂತ್ ವಿಕ್ರಂ ರವರು ಕಾರ್ಯಕ್ರಮದ ಆಯೋಜನೆ ಅಲ್ಲದೇ, ಸುಮಾರು 2.5 ಗಂಟೆಗಳ ಕಾಲ ಎಲ್ಲಾ ಭರತನಾಟ್ಯ ಪ್ರದರ್ಶನಗಳಿಗೆ ತಾವೇ ಹಾಡುಗಾರಿಕೆ ನಿರ್ವಹಿಸಿರುವುದು ಗಮನಾರ್ಹ ಹಾಗು ಪ್ರಶಂಸನೀಯ.
ಇವರಿಗೆ ಪಕ್ಕವಾದ್ಯದಲ್ಲಿ ದೇಶದ ಹೆಸರಾಂತ ವಿದ್ವಾಂಸರಾದ ವಿ. ಜಿ ಎಸ್ ನಾಗರಾಜ್ ಮೃದಂಗವಾದನದಲ್ಲಿ ಮತ್ತು ಕೊಳಲು ವಾದನದಲ್ಲಿ ವಿ. ಗಣೇಶ್ ಪಕ್ವವಾಗಿ ಸಾಥ್ ನೀಡಿದರು. ಅಲ್ಲದೆ ಪ್ರಮತ್ & ಪ್ರಥಮ್ ಉತ್ತಮ ತಬಲ ವಾದನ ಮತ್ತು ಗಾಯನ ಪ್ರಸ್ತುತಪಡಿಸಿದರು” ಎಂದು ಅತಿಥಿಗಳು ಮುಕ್ತ ಮನಸ್ಸಿನಿಂದ ಕೊಂಡಾಡಿದರು.ನೃತ್ಯಗಾರ್ತಿ ಹಾಗು ಡೆಂಟಲ್ ವ್ಯಾಸಂಗ ಮಾಡುತ್ತಿರುವ ಕು. ರಾಗಶ್ರೀ ಉತ್ತಮ ನಿರೂಪಣೆ ಮಾಡಿದರು.