ಅರಸೀಕೆರೆ: ಹೇರಳವಾಗಿ ಮಾನವ ಸಂಪತ್ತನ್ನು ಹೊಂದಿರುವ ದೇಶ ನಮ್ಮದಾಗಿದ್ದರು ಶ್ರಮಿಕರು ಹಾಗೂ ಕಾರ್ಮಿಕರ ಬದುಕು ಆರ್ಥಿಕವಾಗಿ ಸದೃಢವಾಗದೆ ಇರುವುದು ದೇಶದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ ವಿಷಾದಿಸಿದರು.
ಅಸಂಘಟಿತ ಕಟ್ಟಡ ಕಾರ್ಮಿಕರ ಸಂಘಟಿಸುವ ಜತೆಗೆ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಟ್ಟಡ ಕಾರ್ಮಿಕರ ಒಕ್ಕೂಟ ಮತ್ತು ಗುತ್ತಿಗೆದಾರರ ಒಕ್ಕೂಟ ಇವರ ಸಯುಕ್ತ ಆಶಯದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರ್ಮಿಕ ವರ್ಗದ ಶ್ರಮ ಮತ್ತು ಬೆವರಿಗೆ ತಕ್ಕ ಬೆಲೆ ನೀಡದೆ ಶ್ರಮಿಕ ಜೀವಿಗಳಿಂದ ದುಡಿಸಿಕೊಳ್ಳುತ್ತಿದ್ದು ಈ ವರ್ಗದ ಜನತೆಯ ಬದುಕು ಭದ್ರತೆ ಆಗದ ವರೆತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ರಾಜಕೀಯ ಪ್ರಭುದ್ಧರು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಸುಂಕ ತೆರಿಗೆ ಹೆಸರಿನಲ್ಲಿ ಸಂಗ್ರವಾಗುತ್ತಿರುವ ಕಾರ್ಮಿಕರ ಹಣ ಉದ್ದೇಶದಂತೆ ಈ ವರ್ಗದ ಜನತೆಗೆ ತಲುಪುತ್ತಿಲ್ಲ ಇದು ಅತ್ಯಂತ ವಿಷದ ಸಂಗತಿ ಸರ್ಕಾರ ಇದನ್ನ ಲಗುವಾಗಿ ಪರಿಗಣಿಸಬಾರದು ಕಾರ್ಮಿಕರ ಹೆಸರಿನಲ್ಲಿ ಸಂದಾಯವಾಗುವ ತೆರಿಗೆ ಹಣ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಮೀಸಲಾಗಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷ ಗಿರೀಶ್ ಮಾತನಾಡಿ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಲವು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸಿದೆ ಆದರೆ ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ಕಾರ್ಮಿಕರು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಆಗದೆ ಇರುವುದು ವಿಷಾದ ಸಂಗತಿ ಈ ನಿಟ್ಟಿನಲ್ಲಿ ಅಸಂಘಟಿತರಾಗಿರುವ ಕಟ್ಟಡ ಕಾರ್ಮಿಕರು ಸೇರಿದಂತೆ ಕಾರ್ಮಿಕ ವರ್ಗ ಸಂಘಟಿತವಾಗಬೇಕು ತಮಗೆ ಸಿಗುವ ಸೌಲತ್ತು ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಹಾಗು ಸಾಮಾಜಿಕವಾಗಿ ಮುಂದೆ ಬರುವಂತೆ ಕರೆ ನೀಡಿದರು.
ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ್ ಮಾತನಾಡಿಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಮನೆಯಿಂದ ಕಾರ್ಮಿಕ ಕೆಲಸಕ್ಕೆ ಎಂದು ಹೊರಟು ಮತ್ತೆ ಮನೆಗೆ ಮರಳಿ ಬರುವವರೆಗೆ ಅಪಘಾತ ಸಂಭವಿಸಿ ಮೃತಪಟ್ಟರೆ 5 ಲಕ್ಷ ವಿಮೆ ನೀಡುವುದು, ಕಾರ್ಮಿಕ ಮಾತ್ರ ಅಷ್ಟೇ ಅಲ್ಲ ಆತನ ಕುಟುಂಬದವರಿಗೆ ಆರೋಗ್ಯ ಭದ್ರತೆ ವಿದ್ಯಾರ್ಥಿಗಳಿಗೆ ವಿದ್ಯಾ ವೇತನ,ಮಕ್ಕಳ ಮದುವೆಗೆ ಧನಸಹಾಯ,ಹೀಗೆ ಹಲವು ರೀತಿಯಲ್ಲಿ ಕಾರ್ಮಿಕರಿಗೆ ಸೌಲತ್ತುಗಳು ದೊರೆಯುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಮಾರಂಭದಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್,ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಕುಮಾರ್,ಹಿರಿಯ ಕಾರ್ಮಿಕ ನಿರೀಕ್ಷಕ ಎಚ್,ಕೆ ಪ್ರಭಾಕರ್,ರಾಜ್ಯ ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ರಾಮೇಗೌಡ,ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಪ್ಪ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಕಟ್ಟಡ ಕಾರ್ಮಿಕರ ಒಕ್ಕೂಟದ ಹರೀಶ್ ಮೇಸ್ತ್ರಿ,ಮನೋಹರ್ ಮೇಸ್ತ್ರಿ, ನಾಗರಾಜ್, ಸುಬ್ರಹ್ಮಣ್ಯ, ಜಯ ಕರ್ನಾಟಕ ವೇದಿಕೆ ತಾಲೂಕ ಅಧ್ಯಕ್ಷ ವಿನೋದ್ ಕುಟ್ಟಿ, ವೇಲು, ಶಾಂತರಾಜ್, ಸುಬ್ರಮಣ್ಯ ಬಾಬು, ಮತ್ತಿತರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಟ್ಟಡ ಕಾರ್ಮಿಕರು ನಗರದ ಪ್ರವಾಸಿ ಮಂದಿರದ ಆವರಣದಿಂದ ರಾಷ್ಟ್ರೀಯ ಹೆದ್ದಾರಿ 206 ಟಿ ಹೆಚ್ ರಸ್ತೆ ಮಾರ್ಗವಾಗಿ ಮೆರವಣಿಗೆ ಮೂಲಕ ಸಾಗಿ ತಾಲೂಕು ಕಚೇರಿ ಸಮೀಪ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು.
Leave a Review