ಚಿಕ್ಕಮಗಳೂರು: ಒಬ್ಬರಿಗೆ ಟಿಕೆಟ್ ಕೇಳುವ ಸಂಬಂಧ ಮತ್ತೊಬ್ಬರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ತಮಗೆ ಚಿಕ್ಕಮಗಳೂರು ಉಡುಪಿ ಲೋಕಸಭಾ ಕ್ಷೇತ್ರ ಟಿಕೆಟ್ ನೀಡಬಾರದು ಎಂದು ತಮ್ಮ ವಿರುದ್ಧ ಅಭಿಯಾನ ನಡೆಸುತ್ತಿರುವವರ ಸಂಬಂಧ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಶೋಭಾ ಅವರು ಒಬ್ಬರನ್ನು ತೇಜೋವಧೆ ಮಾಡಿ ಮತ್ತೊಬ್ಬರ ಪರ ಟಿಕೆಟ್ ಕೇಳುವುದು ಸಮಂಜಸವಲ್ಲ ಎಂದಿರುವ ಅವರು ತಮ್ಮ ವಿರುದ್ಧ ಅಭಿಯಾನ ನಡೆಸುತ್ತಿರುವ ಮೇಲೆ ತೀವ್ರವಾಗಿ ಕಿಡಿಕಾರಿದ್ದಾರೆ.
ಅಧಿಕಾರಕ್ಕಾಗಿ ಮತ್ತೊಂದು ಪಕ್ಷದಿಂದ ಪಕ್ಷಕ್ಕೆ ಬಂದವರು ಇಂತಹ ಕೆಲಸ ಮಾಡುತ್ತಿದ್ದಾರೆ. ತಮ್ಮ ವಿರೋಧ ನಡೆಯುತ್ತಿರುವ ಪ್ರಾಯೋಜಕತ್ವದ್ದು ಎಂದು ಹೇಳಿರುವ ಅವರು, ಈ ಹಿಂದೆ ಇದ್ದ ಪಕ್ಷದಲ್ಲೂ ಇದೇ ರೀತಿ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ತಮ್ಮ ಬಗ್ಗೆ ಅಭಿಯಾನ ನಡೆಸುತ್ತಿರುವವರಿಗೆ ಶೀಘ್ರವೇ ಉತ್ತರ ದೊರೆಯಲಿದೆ. ಕ್ಷೇತ್ರದ ಅಭಿವೃದ್ಧಿಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಮತಯಾಚನೆ ಮಾಡುತ್ತೇನೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತಯಾಚಿಸುತ್ತೇನೆ. ಕೇಂದ್ರಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಶ್ರಮಿಸಿದ್ದೇನೆ. ಮೋದಿಗೆ ಒಳ್ಳೆ ಹೆಸರು ಬರಬೇಕು ಎಂದು ಕೆಲಸ ಮಾಡಿದ್ದಾರೆ.
ಸಾಮಾನ್ಯ ಕಾರ್ಯಕರ್ತ ಸಹ ಟಿಕೆಟ್ ಕೇಳಬಹುದು ಸಾಮಾನ್ಯಕಾರ್ಯಕರ್ತನಿಗೆ ಅಧಿಕಾರವಿದೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ನಾವು ಇಲ್ಲ. ಯಾರು ಬೇಕಾದರೂ ಟಿಕೆಟ್ ಕೇಳಬಹುದು ಎಂದಿದ್ದಾರೆ.