ರಾಜಕೋಟ್: ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಅತ್ಯುತ್ತಮ ಬೌಲಿಂಗ್ ನ ಹೊರತಾಗಿಯೂ ಸೌರಾಷ್ಟ್ರ ತಂಡ ಕರ್ನಾಟಕದ ವಿರುದ್ಧ ಕೇವಲ ೪ ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮಾಯಾಂಕ್ ಅಗರ್ವಾಲ್ ಬಳಗ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ರಾಜಕೋಟ್ ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಬಿ ಬಣದ ಎಲೈಟ್ ಪಂದ್ಯದಲ್ಲಿ ಕರ್ನಾಟಕ ಗಳಿಸಿದ ೩೭೨ ರನ್ ಗಳಿಗೆ ಪ್ರತಿಯಾಗಿ ಸೌರಾಷ್ಟ್ರ ತಂಡ ೩೭೬ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
ಅಂತಿಮ ವಿಕೆಟ್ ಗೆ ಚೇತನ್ ಸಕರಿಯಾ (೨೯) ಮತ್ತು ಯುವ್ರಾಜ್ ಸಿಂಗ್ ದೊಡಿಯಾ(೧೩) ಅವರು ೩೪ ರನ್ ಗಳ ಜೊತೆಯಾಟ ಆಡುವುದರೊಂದಿಗೆ ಕರ್ನಾಟಕದ ಲೆಕ್ಕಾಚಾರವನ್ನು ಬುಡಮೇಲುಗೊಳಿಸಿದರು. ಅಲ್ಲಿಗೆ ಸೌರಾಷ್ಟ್ರ ಕೇವಲ ೪ ರನ್ ಗಳ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಅಯ್ಯರ್ ಅವರು ಅತ್ಯಮೋಘ ಪ್ರದರ್ಶನ ನೀಡಿ ಎದುರಾಳಿ ತಂಡದ ೮ ವಿಕೆಟ್ ಕಿತ್ತರು. ಚಿರಾಗ್ ರಾಜ್, ಜಯ್ ಗೋಹಿಲ್, ಅಪ್ರಿತ್ ವಾಸವಾಡ, ಅಂಶ್ ಗೋಸಾಯಿ, ಪ್ರೇರಕ್ ಮಾಂಕಡ್, ಸಮ್ಮರ್ ಗಜ್ಜರ್, ಧರ್ಮೇಂದ್ರ ಸಿಂಗ್ ಜಡೇಜಾ, ಚೇತನ್ ಸಕಾರಿಯ ಅವರ ವಿಕೆಟ್ ಗಳನ್ನು ಶ್ರೇಯಸ್ ಗೋಪಾಲ್ ಅವರು ಉರುಳಿಸಿದರು.
ಉಳಿದ ಬೌಲರ್ ಗಳು ಪರಿಣಾಮಕಾರಿ ಪ್ರದರ್ಶನ ನೀಡದ್ದು ಕರ್ನಾಟಕಕ್ಕೆ ಮುಳುವಾಯಿತು. ರಣಜಿ ನಿಯಮದ ಪ್ರಕಾರ ಪಂದ್ಯ ಡ್ರಾಗೊಂಡರೆ ಪ್ರಥಮ ಇನ್ನಿಂಗ್ಸ್ ಗಳಿಸಿದ ತಂಡಕ್ಕೆ ೩ ಅಂಕ ದೊರೆಯುತ್ತದೆ. ಎದುರಾಳಿ ತಂಡಕ್ಕೆ ಕೇವಲ ೧ ಅಂಕ ದೊರೆಯುತ್ತದೆ. ಹೀಗಾಗಿ ಈ ಪಂದ್ಯವನ್ನು ಡ್ರಾಗೊಳಿಸಿದರೆ ಕರ್ನಾಟಕಕ್ಕೆ ಈಗ ಯಾವುದೇ ಲಾಭವಿಲ್ಲ. ಗೆಲ್ಲಲು ಪ್ರಯತ್ನಿಸಬೇಕಾಗಿದೆ. ಗೆದ್ದರೆ ಮಾತ್ರ ೬ ಅಂಕಗಳು ಪೂರ್ಣಪ್ರಮಾಣದಲ್ಲಿ ತನ್ನದಾಗಿಸಿಕೊಳ್ಳಬಹುದು. ೧೦ ವಿಕೆಟ್ ಗಳಿಂದ ಜಯ ಗಳಿಸಿದರೆ ಒಂದು ಬೋನಸ್ ಅಂಕದೊಂದಿಗೆ ೭ ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು.
ಈ ನಿಟ್ಟಿನಲ್ಲಿ ದ್ವಿತೀಯ ಇನ್ನಿಂಗ್ಸ್ಆರಂಭಿಸಿರುವ ಕರ್ನಾಟಕ ತಂಡ ೩ನೇ ದಿನಾಂತ್ಯಕ್ಕೆ ೧ ವಿಕೆಟ್ ನಷ್ಟಕ್ಕೆ ೮೧ ರನ್ ಗಳಿಸಿದೆ. ಹೀಗಾಗಿ ಇನ್ನು ೬ ಅಂಕಗಳನ್ನು ಗಳಿಸಬಹುದು. ೩೧ ರನ್ ಗಳಿಸಿರುವ ನಾಯಕ ಮಾಯಾಂಕ್ ಅಗರ್ವಾಲ್ ಮತ್ತು ೧೮ ರನ್ ಗಳಿಸಿರುವ ದೇವದತ್ ಪಡಿಕ್ಕಲ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ನಿಕಿನ್ ಜೋಸ್ ಅವರು ೩೪ ರನ್ ಗಳಿಸಿ ಔಟಾದರು. ಶನಿವಾರ ಪಂದ್ಯದ ಅಂತಿಮ ದಿನವಾಗಿದ್ದು ಕರ್ನಾಟಕ ತಂಡ ಎದುರಾಳಿಗೆ ಸ್ಪರ್ಧಾತ್ಮಕ ಗುರಿ ನೀಡಿ ಆಲೌಟ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.