ಪಾಂಡವಪುರ: ಉಳಿತಾಯ ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಸ್ಥೆಯು ಅವರ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಹಿರಿಯ ಪತ್ರಕರ್ತ ಎನ್.ಕೃಷ್ಣೇಗೌಡ ಹೇಳಿದರು.
ತಾಲೂಕಿನ ಬನ್ನಂಗಾಡಿ ವಲಯ ಕಾರ್ಯಕ್ಷೇತ್ರ ಬನ್ನಂಗಾಡಿ ಜೆವಿಕೆ ಕೇಂದ್ರದ ದೊಡ್ಡಮ್ಮತಾಯಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪುರಷರಲ್ಲಿ ಉಳಿತಾಯ ಮನೋಭಾವನೆ ಅಡಿ ಕಡಿಮೆ.
ಎಷ್ಟೇ ಹಣ ಬಂದರೂ ಅದನ್ನೂ ನೀರಿನಂತೆ ಖರ್ಚು ಮಾಡುವ ಪುರುಷರು ಆಣಿ ಬಡ್ಡಿಗೂ ಕೈಯೊಡ್ಡುವ ಸಾಧ್ಯತೆಗಳೇ ಹೆಚ್ಚು. ಬಳಿಕ ಮಡದಿ ಚಿನ್ನಾಭರಣ, ಅಡುಗೆ ಮನೆಯಲ್ಲಿ ಕೂಡಿಟ್ಟ ಹಣವನ್ನೂ ಅವರು ಪೋಲು ಮಾಡುತ್ತಾರೆ. ಆದರೆ ಮಹಿಳೆಯರು ಸಣ್ಣ ಪ್ರಮಾಣದ ಹಣವನ್ನೂ ಕೂಡಿಟ್ಟು ಉಳಿತಾಯ ಮಾಡುವ ಮೂಲಕ ತನ್ನ ಕುಟುಂಬದ ಹಿತ ಕಾಪಾಡುತ್ತಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಿಗುತ್ತಿರುವ ಹತ್ತು ಹಲವಾರು ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಂಡು ಗುಡಿ ಕೈಗಾರಿಕೆ ಸ್ಥಾಪಿಸಿ ತಾವೇ ಸ್ವತಃ ಉತ್ಪನ್ನಗಳನ್ನು ಸಿದ್ದಪಡಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಗತಿ ಸಾಧಿಸುವಂತೆ ಅವರು ಕರೆ ನೀಡಿದರು.
ಕೇಂದ್ರದ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ಕುಮಾರಿ, ವಲಯದ ಮೇಲ್ವಿಚಾರಕ ನಾರಾಯಣ, ಜ್ಞಾನವಿಕಾಸ ಸಮನ್ವಯಧಿಕಾರಿ ತೇಜಸ್ವಿನಿ, ಸೇವಾಪ್ರತಿನಿಧಿ ರೂಪ ಹಾಗೂ ಕೇಂದ್ರದ ಸದಸ್ಯರು ಇತರರು ಭಾಗವಹಿಸಿದ್ದರು. ಬಳಿಕ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿ ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು.