ನೆಲಮಂಗಲ: “ಎಲ್ಲಿ ಹನುಮನೋ.. ಅಲ್ಲಿ ರಾಮನು..” ಎಂಬ ನಾಣ್ಣುಡಿಯಂತೆ, ತಾಲ್ಲೂಕಿನಾದ್ಯಂತ ಬುಧವಾರ ಶ್ರೀರಾಮನವಮಿಯನ್ನು ಅತ್ಯಂತ ಸಡಗರ-ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ತಾಲ್ಲೂಕಿನ ಪ್ರಮುಖ ಶ್ರೀರಾಮ ಮತ್ತು ಆಂಜನೇಯಸ್ವಾಮಿ ದೇಗುಲಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀರಾಮ ಜಯಂತಿಯ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಲೋಕಕಲ್ಯಾಣಾರ್ಥವಾಗಿ ಹೋಮಹವನಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯೇ ದೇವರಿಗೆ ಅಭಿಷೇಕ, ಪಂಚಾಮೃತ ಸ್ನಾನ ಹಾಗೂ ವಿಶೇಷ ಪುಷ್ಪಾ
ಲಂಕಾರಗಳನ್ನು ಮಾಡಲಾಗಿತ್ತು. ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಶ್ರೀರಾಮಾಂಜ ನೇಯರ ದರ್ಶನ ಪಡೆದು ಪುನೀತರಾದರು.ಪಟ್ಟಣದ ಐತಿಹಾಸಿಕ ಹಿನ್ನೆಲೆಯುಳ್ಳ, ಕ್ರಿ.ಶ. 1650-1700ರ ಅವಧಿಯ ಶಾಸ್ತ್ರ ಪದ್ಧತಿಯಲ್ಲಿ ನಿರ್ಮಿತವಾದ ಉತ್ತರಘಟ್ಟ ಆಂಜನೇಯಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ಸೊಂಡೇಕೊಪ್ಪ ರಸ್ತೆಯ ವೃತ್ತದಲ್ಲಿರುವ ಭಜರಂಗಿ ಗುಡಿಯಲ್ಲಿ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು. ಇನ್ನು ಪ್ರಾಚೀನ ಶ್ರೀಹಿಪ್ಪೆ ಆಂಜನೇಯಸ್ವಾಮಿ, ಚನ್ನಪ್ಪ ಬಡಾವಣೆಯ ಶ್ರೀರಾಮಾಂಜನೇಯಸ್ವಾಮಿ, ಜಿ.ಪಂ. ಕಚೇರಿ ಬಳಿಯ ಭಕ್ತ ಆಂಜನೇಯಸ್ವಾಮಿ ಹಾಗೂ ತಿಮ್ಮಶೆಟ್ಟಪ್ಪ ಬಡಾವಣೆಯ ಅಪ್ಪುಗೆಯ ಶ್ರೀವೀರಾಂಜನೇಯಸ್ವಾಮಿ ದೇಗುಲಗಳಲ್ಲಿ ಭಕ್ತರ ಸಾಗರವೇ ಹರಿದುಬಂದಿತ್ತು.ನಗರಕ್ಕೆ ಸನಿಹವಿರುವ ಅರಿಶಿನ ಕುಂಟೆಯಲ್ಲಿ ಶ್ರೀಆಂಜನೇಯ ಸ್ವಾಮಿಯವರ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು. ಅಲಂಕೃತ ರಥವನ್ನು ಎಳೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಬಿಸಿಲಿನ ಬೇಗೆಯಿಂದ ದಣಿದ ಭಕ್ತರಿಗಾಗಿ ಪ್ರತಿ ದೇಗುಲದ ಮುಂಭಾಗದಲ್ಲಿ ಮತ್ತು ಪ್ರಮುಖ ವೃತ್ತಗಳಲ್ಲಿ ಸಿಹಿ ಬೆಲ್ಲದ ಪಾನಕ, ಮಜ್ಜಿಗೆ ಹಾಗೂ ಹೆಸರುಬೇಳೆ ಕೋಸಂಬರಿಯನ್ನು ವಿತರಿಸಲಾಯಿತು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಫಲಾವ್, ಟೊಮೆಟೊಬಾತ್ ಸೇರಿದಂತೆ ಅದ್ದೂರಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.ತಾಲ್ಲೂಕಿನ ತ್ಯಾಮಗೊಂಡ್ಲು, ಸೋಂಪುರ ಹೋಬಳಿ ಹಾಗೂ ರೈಲ್ವೇಗೊಲ್ಲಹಳ್ಳಿಯ ಶ್ರೀಆಂಜನೇಯಸ್ವಾಮಿ ದೇಗುಲಗಳಲ್ಲೂ ದಿನವಿಡೀ ಭಜನೆ, ಕೀರ್ತನೆಗಳು ಮೊಳಗುವ ಮೂಲಕ ತಾಲ್ಲೂಕಿನಾದ್ಯಂತ ರಾಮನಾಮ ಸ್ಮರಣೆ ಮನೆಮಾಡಿತ್ತು.
ನೆಲಮಂಗಲ ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಸಂಭ್ರಮ ಭಕ್ತಿ ಪರಾಕಾಷ್ಠೆ, ಅದ್ದೂರಿ ರಥೋತ್ಸವ



