ಆನೇಕಲ್: ಸರ್ಜಾಪುರ ಸಮೀಪದ ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಗಳಚೌಡದೇನಹಳ್ಳಿ ಗ್ರಾಮದ ಓಂ ಶ್ರೀ ಗ್ರಾಮ ದೇವತೆ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ಶ್ರೀ ದೇವಿ, ಭೂದೇವಿ ಸಮೇತ ಶ್ರೀ ತಿರುಮಲ ಸ್ವಾಮಿ ಬ್ರಹ್ಮ ರಥೋತ್ಸವವು ಭಾನುವಾರ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತೋರಣಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ ದೇಗುಲದಲ್ಲಿ ಶ್ರೀ ದೇವಿ, ಭೂದೇವಿತ ಸಮೇತ ಶ್ರೀ ತಿರುಮಲ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ತೇರನ್ನು ವಿವಿಧ ಪುಷ್ಪ ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಲಾಗಿತ್ತು.
ಬೆಳಿಗ್ಗೆ 11 ಗಂಟೆಗೆ ಧಾರ್ಮಿಕ ವಿಧಿ ವಿಧಾನಗ ಳೊಂದಿಗೆ ದೇವಸ್ಥಾನದಿಂದ ಶ್ರೀ ದೇವಿ, ಭೂದೇವಿತ ಸಮೇತ ಶ್ರೀ ತಿರುಮಲ ಸ್ವಾಮಿ ವಿಗ್ರಹ ಮೂರ್ತಿಯನ್ನು ಕರೆತಂದು ತೇರಿನ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ದೇವರನ್ನು ತೇರಿನ ಮೇಲೆ ಕುಳ್ಳಿರಿಸಿ ಪುಷ್ಪಾಲಂಕಾರ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜನರು ತೇರಿಗೆ ಬಾಳೆಹಣ್ಣು ಧವನವನ್ನು ಎಸೆದು ಪ್ರಾರ್ಥಿಸಿದರು.
ಆಗಮಿಸಿದ ಜನರಿಗೆ ಗ್ರಾಮದ ರಾಜ ಬೀದಿಗಳಲ್ಲಿ ಮಜ್ಜಿಗೆ ಪಾನಕಗಳನ್ನು ವಿತರಿಸಿದರು. ಇನ್ನೂ ಓಂ ಶ್ರೀ ನಾಗಾ ದೇವತಾ ಪಡವಟ್ಟಮ್ಮ
ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆಯನ್ನೂಆಯೋಜಿಸಲಾಗಿತ್ತು. ಬ್ರಹ್ಮರಥೋತ್ಸವಕ್ಕೆ ಬೆಂಗಳೂರು ನಗರ ಮತ್ತು ಆನೇಕಲ್ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಹಿರಿಯ ಮುಖಂಡ ಟಿ.ವಿ ಬಾಬು ಮಾತನಾಡಿ, ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ಬ್ರಹ್ಮರಥೋತ್ಸವ ವನ್ನು ಆಚರಿಸಲಾಗುತ್ತಿದ್ದು ಸ್ವಾಮಿಯನ್ನು ಭಕ್ತಿಪೂರ್ವಕವಾಗಿ ನಮಿಸಿದ್ದಲ್ಲಿ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಪ್ರತಿತಿಯಿದೆ ಎಂದರು.
ಆನೇಕಲ್ ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾಘಟಕದ ಅಧ್ಯಕ್ಷೆ ಸುಶೀಲಮ್ಮ ಮಾತನಾಡಿ, ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಆಚರಿಸಿಕೊಳ್ಳಲಾಗುತ್ತಿದ್ದು ಅದರಂತೆ ಇಂದು ನಾವೆಲ್ಲರೂ ಸಹ ಅದೇ ಮಾರ್ಗದಲ್ಲಿ ಸಾಗುತ್ತಿದ್ದು ಧರ್ಮವನ್ನು ಕಟ್ಟುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಬ್ರಹ್ಮರಥೋತ್ಸವದಲ್ಲಿ ಮುಖಂಡ ಟಿ.ವಿ ಬಾಬು, ಆನೇಕಲ್ ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಮ್ಮ, ಮುಖಂಡ ರಾದ ಜಯಪ್ರಕಾಶ್, ಭರತ್, ಶ್ರೀನಿವಾಸ್, ಭಾಸ್ಕರ್, ಕೇಶುವ್, ನವೀನ್, ವೆಂಕಟೇಶ, ಮುನಿರಾಜು, ಹಾಗೂ ಮುತ್ತಿತರರು ಹಾಜರಿದ್ದರು.
Leave a Review