This is the title of the web page
This is the title of the web page

ನಿಮಗೆ ಕೈ ಮುಗಿಯುತ್ತೇನೆ ಜನಪರ ಕಾಳಜಿಯುಳ್ಳ ಬಾಲಕೃಷ್ಣರನ್ನು ಗೆಲ್ಲಿಸಿ: ಸಿದ್ದರಾಮಯ್ಯ

ಮಾಗಡಿ: ಈ ತಾಲ್ಲೂಕಿನ ಪ್ರಭುದ್ದ ಮತದಾರರೇ ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಅವರು ಜನಪರ ಕಾಳಜಿ ಯುಳ್ಳ ಜನನಾಯಕರಾಗಿದ್ದು ಕಳೆದ ಚುನಾವಣೆಯಲ್ಲಿ ಅವರನ್ನು ತಾವು ಸೋಲಿಸಿದ್ದೀರಿ.ಆದರೆ ಈ ಭಾರಿ ಅವರನ್ನು ಗೆಲ್ಲಿಸಿ ಎಂದು “ಕೈ ಮುಗಿದು” ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದರು.

ಪಟ್ಟಣದಲ್ಲಿ ಮಹಾನಾಡು ಕಟ್ಟೆಮನೆ ಕುಟುಂಬದ ಶ್ರೀಮತಿ ಶಾರದಮ್ಮ ದಿ.ಎಚ್.ಜಿ.ಚನ್ನಪ್ಪ ಅವರ ಸವಿ ನೆನಪಿನಲ್ಲಿ ಬೃಹತ್ ಶಾದಿಮಹಲ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಸದಾಕಾಲವೂ ಬಡವರ ಜನಪರವಾದ ಕಾಳಜಿ ಇರುವ ಕುಟುಂಬ ಹುಲಿಕಟ್ಟೆ ಮನೆತನವಾಗಿದೆ.ಬಾಲಕೃಷ್ಣ ಅವರ ತಂದೆ ಚನ್ನಪ್ಪನವರು ಶಾಸಕರಾಗಿ ಸಚಿವರಾಗಿ ಜನಾನುರಾಗಿ ಸೇವೆ ಮಾಡಿದಂತಹ ಮನೆತನವಾಗಿದೆ.

ಅವರು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ನಡೆದು ಬಂದಿರುವ ಬಾಲಕೃಷ್ಣ ನಾಲ್ಕು ಭಾರೀ ಶಾಸಕರಾಗಿ ಜಾತ್ಯಾತೀತ ನಾಯಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂದು ಮುಸಲ್ಮಾನ ಬಂಧುಗಳಿಗೆ ಅವರ ಕುಟುಂಬ ಮತ್ತು ಸರಕಾರದ ವತಿಯಿಂದ ಯಾವುದೇ ಅಧಿಕಾರವಿಲ್ಲದಿದ್ದರೂ ಶಾದಿಮಹಲ್ ನಿರ್ಮಿಸಿಕೊಟ್ಟು ಇಂದು ಉದ್ಘಾಟಿಸುತ್ತಿರುವುದು ಸ್ವಾಗತಾರ್ಹ. ಇಂತಹ ಸಾಮಾನ್ಯ ಜನರ ಬಡವರ ಪರ ಸದಾಕಾಲವೂ ಶ್ರಮಿಸುವ ಇಚ್ಚಾಶಕ್ತಿಯಿರುವ ನಾಯಕನನ್ನು ಕಳೆದ ಭಾರಿ ಸೋಲಿಸಿದ್ದೀರಿ ಇದು ಸರಿಯೇ ಎಂದು ಪ್ರಶ್ನಿಸಿದ ಅವರು ಈ ಕ್ಷೇತ್ರದ ಪ್ರಭುದ್ದ ಮತದಾರರೇ ನಿಮಗೆ “ಕೈ ಮುಗಿಯುತ್ತೇನೆ “ಬಾಲಕೃಷ್ಣ ಅವರನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಸಿದ್ದರಾಮಯ್ಯ ತಿಳಿಸಿದರು.

ನನ್ನನ್ನು ಸಿದ್ದರಾಮುಲ್ಲಾಖಾನ್ ಎಂದು ಟೀಕಿಸುವ ನಿಂದಿಸುವ ಸಿ.ಟಿ.ರವಿಯವರೇ ನಾನು ನಿಜವಾಗಿಯೂ ಹಿಂದೂನೇ,ನನ್ನ ಹೆಸರು ಸಿದ್ದರಾಮಯ್ಯ ನಮ್ಮೂರು ಸಿದ್ದರಾಮನಹುಂಡಿ ನಮ್ಮ ಮನೆದೇವರು ಸಿದ್ದರಾಮೇಶ್ವರ, ನೀವು ಬಿಜೆಪಿಗರು ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಗಳಿಸಲು ಪ್ರಯತ್ನಿಸುತ್ತಿದ್ದೀರಾ.

ಈ ಆಟ ಈ ಭಾರಿ ನಡೆಯುವುದಿಲ್ಲ. ಜಾತಿಯ ವಿಷಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನೀವು ಇದು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಈ ದೇಶದ ಪ್ರತಿಯೊಬ್ಬರಲ್ಲಿಯೂ ಹರಿಯುತ್ತಿರುವುದು ಒಂದೇ ರಕ್ತ ಅದು ಕೆಂಪು ರಕ್ತವಾಗಿದೆ. ಹಿಂದೂಗಳಲ್ಲಿ ಒಂದು ಬಣ್ಣ,ಮುಸಲ್ಮಾನರಲ್ಲಿ ಒಂದು ಬಣ್ಣ, ಕ್ರಿಶ್ಚಿಯನ್ ಗಳಲ್ಲಿ ಮತ್ತೊಂದು ಬಣ್ಣ ಹರಿಯುತ್ತಿಲ್ಲ.

ಜನಪರ ಕಾಳಜಿಯುಳ್ಳ ರೈತರ ಪರ, ನಿರುದ್ಯೋಗ ನಿವಾರಣೆ ಮಾಡುತ್ತೇವೆ ಎಂದು ಆಶ್ವಾಸನೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತಕ್ಕೆ ಅಂತಿಮ ಅಂಕಿತ ಹಾಕಲು ಈ ರಾಜ್ಯದ ಜನತೆ ತುದಿಗಾಲಲ್ಲಿ ನಿಂತಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದ ನೀವು ಈ ರಾಜ್ಯದ ಜನತೆಯ ವಿಶ್ವಾಸ ಗಳಿಸಲು ಯಾವುದೇ ಅಭಿವೃದ್ಧಿಯ ಸಾಕ್ಷಿ ಗುಡ್ಡೆಯಿಲ್ಲ. ಬ್ರಷ್ಠಾಚಾರ, ಬೆಲೆ ಏರಿಕೆ,40% ಕಮೀಷನ್, ಎಸ್ಸೈ ನೇಮಕಾತಿ ಹಗರಣ ಸೇರಿದಂತೆ ನಿಮ್ಮ” ಲ್ಯಾಪ್ಸ್ “ಆಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದು ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.

ನಾಡಿನ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದು ಪ್ರತಿಕುಟುಂಬದ ಒಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ,ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಅಕ್ಕಿ,ಉಚಿತ ಕರೆಂಟ್ ನೀಡಲಾಗುವುದು. ಜಿ.ಪರಮೇಶ್ವರ್ ನೇತೃತ್ವದಲ್ಲಿ ಪ್ರಣಾಳಿಕೆ ಸಿದ್ದವಾಗುತ್ತಿದ್ದು ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಲಾಗುವುದು.ನಾವು ಅಧಿಕಾರಕ್ಕೆ ಬರಲಿದ್ದು ಮುಸಲ್ಮಾನ ಬಂಧುಗಳಿಗೆ ಹತ್ತು ಸಾವಿರ ಕೋಟಿ ರೂ ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಾಜಿ ಸಚಿವರು ಹಾಲಿ ಶಾಸಕರಾದ ಜಮೀರ್ ಅಹಮ್ಮದ್ ಖಾನ್ ಮಾತನಾಡಿ ನನ್ನ ಆತ್ಮೀಯ ಸ್ನೇಹಿತರಾದಬಾಲಕೃಷ್ಣ ಅವರು ನಮ್ಮ ಸಮುದಾಯದ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಅಧಿಕಾರವಿಲ್ಲದಿದ್ದರೂ ಅತಿ ಹೆಚ್ಚಿನ ಶ್ರದ್ದೆ ಇಚ್ಚಾಶಕ್ತಿ ಕಾಳಜಿಯಿಂದ ಶಾದಿಮಹಲ್ ನಿರ್ಮಿಸಿರುವುದು ಸ್ವಾಗತಾರ್ಹ ಬೆಳವಣಿಗೆ.ವೈಯಕ್ತಿಕವಾಗಿಹಾಗೂ ನಮ್ಮ ಸಮುದಾಯದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಭಾಗಿ ನಮ್ಮ ಸೋದರ ಸಮಾನರಾದ “ಹುಲಿಕಟ್ಟೆ ಬಾಲಕೃಷ್ಣ”ಅವರನ್ನು ಸಮುದಾಯದ ಮತದಾರರು ಹೆಚ್ಚಿನ ಮತ ನೀಡಿ ಅವರ ಸೇವೆಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ ಅವರು ಸಿದ್ದರಾಮಯ್ಯ ಸಿ.ಎಂ.ಆಗಿದ್ದಾಗ ಅಲ್ಪಸಂಖ್ಯಾತರಿಗೆ 3500 ಕೋಟಿ ರೂ ಹಣವನ್ನು ಮೀಸಲಿಟ್ಟು ಸಾಲ ಮನ್ನಾ ಮಾಡಿದ್ದರು.ಆದರೆ ಕೋಮುವಾದಿ ಬಿಜೆಪಿಗರು 600 ಕೋಟಿಗೆ ಇಳಿಸಿದ್ದಾರೆ.ಇದು ಮಲತಾಯಿ ಧೋರಣೆಯಾಗಿದೆ ಎಂದು ಜಮೀರ್ ಹರಿಹಾಯ್ದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ ಮಾತನಾಡಿ ಕಳೆದ ಎಂಟು ವರ್ಷಗಳ ಹಿಂದೆ ನಾನು ಅಲ್ಪಸಂಖ್ಯಾತರ ಒಂದು ಮದುವೆ ಸಮಾರಂಭಕ್ಕೆ ಭಾಗವಹಿಸಿದ್ದಾಗ ಇವರ ಪರಿಸ್ಥಿತಿಯನ್ನು ನೋಡಿ ನನಗೆ ತುಂಬಾ ನೋವಾಯಿತು.ಅಂದೇ ನಿರ್ಧರಿಸಿ ನಮ್ಮ ಜನುಮದಾತರ ಹೆಸರಿನಲ್ಲಿ ನಿವೇಶನ ಖರೀದಿಸಿ ಶಾಸಕರಾದ ಜಮೀರ್, ತನ್ವೀರ್ ಸೇಠ್,ಮಾಜಿ ಎಂ.ಎಲ್.ಸಿ.ಆಗಾ,ಇ.ಕೃಷ್ಣಪ್ಪ ಸೇರಿದಂತೆ ಇನ್ನಿತರರ ನೆರವಿನೊಂದಿಗೆ ಈ ಶಾದಿಮಹಲ್ ನಿರ್ಮಿಸಲಾಗಿದೆ.ಕಾಂಪೌಂಡ್ ನಿರ್ಮಿಸಲು ಸಂಸದರಾದ ಡಿ.ಕೆ.ಸುರೇಶ್ ಅವರು 50 ಲಕ್ಷ ರೂ ನೀಡಲಿದ್ದಾರೆ.

ನಾವು ಯಾರಿಗೆ ಏನು ಮಾಡಬೇಕು ಎಂದು ಅಧಿಕಾರವಿಲ್ಲದಿದ್ದರೂ ಇಂದು ಶಾದಿಮಹಲ್ ನಿರ್ಮಿಸಿ ಮಾನ್ಯ ಸಿದ್ದರಾಮಯ್ಯ ಅವರಲ್ಲಿ ಲೋಕಾರ್ಪಣೆ ಮಾಡಿಸಿರುವುದು ನನಗೆ ಆತ್ಮತೃಪ್ತಿಯಿದೆ.ಇದು ನನಗೆ ಮತ್ತು ನಮ್ಮ ಕುಟುಂಬಕ್ಕೆ ಅಲ್ಪಸಂಖ್ಯಾತರು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಅಭಿಮಾನಕ್ಕೆ “ಅಳಿಲುಸೇವೆ”ಯಾಗಿದೆ ಎಂದು ಬಾಲಕೃಷ್ಣ ತಿಳಿಸಿದರು.

ಎಂ.ಎಲ್.ಸಿ.ರವಿ.ಸಿ.ಎಂ.ಲಿಂಗಪ್ಪ ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ 75 ರ ಗುಡೇಮಾರನಹಳ್ಳಿಯಿಂದ ಶಾದಿಮಹಲ್ ವರೆಗೆ ಸುಮಾರು 1500 ರಕ್ಕೂ ಹೆಚ್ಚಿನ ಬೈಕ್ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು.ಹನ್ನೆರಡು ಕಿಲೋಮೀಟರ್ ದೂರದಿಂದ ಬೈಕ್ ರ್ಯಾಲಿಯಲ್ಲಿ ಸಿದ್ದರಾಮಯ್ಯ ಮತ್ತು ಗಣ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.

ಬೆಳಗುಂಬದಲ್ಲಿ ಜಿಪಂ ಮಾಜಿ ಸದಸ್ಯ ವಿಜಯಣ್ಣ ಮತ್ತು ತಂಡದವರಿಂದ ಜೆಸಿಬಿಯಲ್ಲಿ ಪುಷ್ಪಾರ್ಚನೆ,ಸೇಬಿನ ಹಾರವನ್ನು ಹಾಕಿ ಗಣ್ಯರನ್ನು ಅಭೂತಪೂರ್ವಕವಾಗಿ ಸ್ವಾಗತಿಸಲಾಯಿತು.ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರು ಮುಖಂಡರು ಅಲ್ಪಸಂಖ್ಯಾತ ಪಟ್ಟಣ ಜಿಲ್ಲಾ ತಾಲ್ಲೂಕು ರಾಜ್ಯದ ಮುಖಂಡರು ಭಾಗವಹಿಸಿದ್ದರು.