ದೇವನಹಳ್ಳಿ :ತಾಲೂಕಿನ ಪೂಜನಹಳ್ಳಿ ಗ್ರಾಮದ ರೈತರಿಗೆ ಸರ್ಕಾರದಿಂದ ಮಂಜೂರಾದ ಭೂಮಿ ರೈತರಿಗೆ ಉಳಿಯಬೇಕು. ರೈತರ ಜಮೀನು ಕಬಳಿಸುವ ಹುನ್ನಾರ ಮಾಡುತ್ತಿರುವ ತಕರಾರುದಾರರ ವಿರುದ್ಧ ನ್ಯಾಯಯುತವಾಗಿ ರೈತರಿಗೆ ದಕ್ಕುವಂತಾಗಲಿ ಎಂದು ದೇವನಹಳ್ಳಿ ತಾಲೂಕು ರೈತರ ಪರವಾಗಿ ಯುವ ಮುಖಂಡ ಕನ್ನಮಂಗಲ ಸಂದೀಪ್ ಮನವಿ ಮಾಡಿದರು.
ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಸಮಾಜದ ನ್ಯಾಯ ಹಾಗೂ ಹಿತ ಚಿಂತಕ ನಾಗರೀಕರ ಸಂಘದ ವತಿಯಿಂದ ನಡೆದ ರೈತರ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಪೂಜನಹಳ್ಳಿ ಗ್ರಾಮದ ರೈತರಿಗೆ ಸರಕಾರದಿಂದ ನ್ಯಾಯಬದ್ಧವಾಗಿ ಜಮೀನು ಮಂಜೂರು ಮಾಡಿರುವ ಕ್ರಮ ಸರಕಾರದ ಮಂಜೂರಾತಿ ಕಡತದಲ್ಲಿರುವ ಹಾಗೂ ಅನೇಕ ನ್ಯಾಯಾಲಯಗಳಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ರೈತರ ಪರವಾಗಿಯೇ ಜಮೀನು ಮಂಜೂರು ಆಗಿರುತ್ತದೆ.
ಆದರೆ, ಕೆಲವರ ಉದ್ದೇಶ ಬೇರೆ ಇದ್ದು, ಸ್ಮಶಾನ ಜಾಗ ಬೇಕು ಎಂದು ಹೇಳಿಕೊಂಡು ರೈತರಿಗೆ ಮಂಜೂರಾಗಿರುವ ಜಮೀನಿನ ಮೇಲೆ ಕೆಂಗಣ್ಣು ಬಿದ್ದಿದೆ. ಆದರೆ, ಸರಕಾರಕ್ಕೆ ಸ್ಮಶಾನದ ಜಾಗ ಗುರುತಿಸಿಕೊಡಬೇಕೆಂದು ಒತ್ತಾಯಿಸಬೇಕೆ ವಿನಃ, ರೈತರಿಗೆ ಮಂಜೂರಿಯಾಗಿರುವ ಜಮೀನಿನ ಮೇಲೆ ಹಗೆಸಾದಿಸುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ಪರವಾಗಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರಿಗೆ ಸತ್ಯಾಂಶದ ತಿಳುವಳಿಕೆ ಪತ್ರ, ವಸೂಲಿಗಾರರ ದುರಾಶೆಗಳಿಂದ ಕೂಡಿದ ಅಪಪ್ರಚಾರಕ್ಕೆ ಸಾರ್ವಜನಿಕರು ಬಲಿಯಾಗಬಾರದೆಂದು ಮನವಿ ಕರಪತ್ರವನ್ನು ಅಪರ ಜಿಲ್ಲಾಧಿಕಾರಿ ಅಮರೇಶ್ ಅವರಿಗೆ ನೀಡಿದರು.ರೈತ ಮುಖಂಡರಾದ ಕನ್ನಮಂಗಲ ನಾಗರಾಜ್ ಪೂಜಾರಿ, ಮಂಜುನಾಥ್, ಮುನಿಯಪ್ಪ, ಪಾರ್ವತಮ್ಮ, ಆಂಜಿನಪ್ಪ, ಹನುಮಯ್ಯ, ರಾಮಾಂಜಿನಪ್ಪ, ಸೇರಿದಂತೆ ಅನೇಕ ರೈತರು, ಕನ್ನಮಂಗಲ ಗ್ರಾಪಂ ಸದಸ್ಯ ನರಸಿಂಹಮೂರ್ತಿ, ವಿಶ್ವನಾಥಪುರ ಪೊಲೀಸ್ ಇನ್ಸ್ಪೆರ್ಕ್ಟ ಟಿ.ಶ್ರೀನಿವಾಸ್ ಮತ್ತಿತರರು ಇದ್ದರು.