ಬಾಬೂಜಿಯವರ ಕಾರ್ಯ ವೈಖರಿ ಹೇಗಿತ್ತು ಎಂಬುದಕ್ಕೆ ಒಂದು ಉದಾಹರಣೆ ಕೊಡುವುದಾದರೆ;”ಒಮ್ಮೆ ಊರಿಂದೂರಿಗೆ ಸಂಚರಿಸುವ ಒಬ್ಬ ಸನ್ಯಾಸಿ ಒಂದು ಊರಿಗೆ ಬರುತ್ತಾನೆ. ಕತ್ತಲಾದ್ದರಿಂದ ತಂಗಲು ಸೂಕ್ತ ಸ್ಥಳ ಹುಡುಕುತ್ತಿರುತ್ತಾನೆ. ದೂರದಲ್ಲಿ ಕಂಡ ಒಂದು ಮಂಟಪವನ್ನು ನೋಡಿ ಅಲ್ಲಿ ಈ ರಾತ್ರಿ ತಂಗಲು ಸ್ಥಳ ಸೂಕ್ತವಾಗಿದೆಯೇ ಪರಿಶೀಲಿಸಿ ಬಂದು ತಿಳಿಸು ಎಂದು ತನ್ನ ಒಬ್ಬ ಶಿಷ್ಯನನ್ನು ಕಳುಹಿಸುತ್ತಾನೆ.
ಶಿಷ್ಯ ಬಂದು ನೋಡಿದಾಗ ಮಂಟಪದಲ್ಲೆಲ್ಲ ಕತ್ತಲು ಆವರಿಸಿರುತ್ತದೆ. ಕತ್ತಲಲ್ಲಿ ನೋಡಲು ಆಗುವುದಿಲ್ಲವೆಂದು ಭಾವಿಸಿದ ಶಿಷ್ಯ ಅಲ್ಲಿ ಬೆಳಕು ತರಲು “ದೀಪಿಕಾ ರಾಗ” ವನ್ನು ಪಠಿಸಲು ಶುರುಮಾಡುತ್ತಾನೆ. ಹೋದ ಶಿಷ್ಯ ಎಷ್ಟೋತ್ತಾದರೂ ಬರದೆ ಇರುವುದನ್ನು ಕಂಡ ಗುರುಗಳು ಮತ್ತೊಬ್ಬ ಶಿಷ್ಯನನ್ನು ಕಳುಹಿಸುತ್ತಾರೆ. ಆತನು ಸಹ ಮಂಟಪದಲ್ಲಿ ಬೆಳಕು ತರಲು ತಾನು ಕವಿಯಾದ್ದರಿಂದ “ಕರುನಾಳು ಬಾ ಬೆಳಕೆ” ಎಂದು ಹಾಡಲು ತೊಡಗುತ್ತಾನೆ. ಹೋರಾಟದ ಸ್ವಭಾವನಾದ ಮತ್ತೊಬ್ಬ ಶಿಷ್ಯನು ಬಂದು ನೋಡುತ್ತಾನೆ. ಕತ್ತಲಿರುವುದನ್ನು ಕಂಡು ಇದು ಯಾರೋ ಮನುವಾದಿಗಳಂತಹವರ ಕೃತ್ಯ ಇರಬೇಕು. ನಾವು ಇಲ್ಲಿ ಬಂದು ತಂಗಬಾರದು ಎಂಬ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ.
ನಮ್ಮ ಹಕ್ಕುಗಳಿಗಾಗಿ ನಾವು ಹೋರಾಟ ಮಾಡಲೇಬೇಕು. ಇವರ ದೌರ್ಜನ್ಯಕ್ಕೆ ಸೂಕ್ತ ಉತ್ತರ ಕೊಡಲೇಬೇಕು ಎಂದು ತನ್ನ ಅನುಯಾಯಿಗಳ ಜೊತೆ ಕತ್ತಲನ್ನು ಹೊರಗೋಡಿಸಲು ಹೋರಾಡ ತೊಡಗುತ್ತಾನೆ. ಎಲ್ಲದಕ್ಕೂ ಅನುಮಾನ ಪಡುವ ಮತ್ತೊಬ್ಬ ಶಿಷ್ಯ ಕತ್ತಲೆ ಹೇಗೆ ಎಲ್ಲಿಂದ ಬರುತ್ತಿದೆ. ಅದನ್ನು ಹೇಗೆ ಓಡಿಸುವುದು ಎಂದು ಯೋಚಿಸುತ್ತಾ ಕುಳಿತುಬಿಡುತ್ತಾನೆ. ಇತ್ತ ಹೋದವರು ಯಾರೂ ಬರದಿದ್ದುದರಿಂದ ತುಂಬಾ ಕತ್ತಲಾಗುತ್ತ ಬಂದದ್ದರಿಂದ ಕಂಗಾಲಾದ ಸನ್ಯಾಸಿಯು ತನ್ನ ಸಹಾಯಕನನ್ನು ನೋಡಿಕೊಂಡು ಬರಲು ಕಳುಹಿಸುತ್ತಾನೆ.
ಸಮಯ ಪ್ರಜ್ಞೆಯ ಅರಿವಿದ್ದ ಸಹಾಯಕನು ಏನೇನು ಕಷ್ಟ ಪಡದೆ ನಾಲ್ಕೈದು ಒಣ ಕಡ್ಡಿಗಳನ್ನು ಜೋಡಿಸಿ ಕಲ್ಲುಗಳನ್ನು ತೆಗೆದುಕೊಂಡು ಒಂದಕ್ಕೊಂದು ತಾಕಿಸಿ ಬೆಂಕಿ ಬರಿಸಿ ಒಣಕಡ್ಡಿಗಳನ್ನು ಹೊತ್ತಿಸಿ ಅದರ ಬೆಳಕಿನಲ್ಲಿ ಮಂಟಪವನ್ನು ನೋಡಿಕೊಂಡು ಬಂದು ಸ್ಥಳ ತಂಗಲು ಸೂಕ್ತವಾಗಿದೆ ಎಂದು ತನ್ನ ಗುರುಗಳಿಗೆ ತಿಳಿಸುತ್ತಾನೆ”ಹೀಗೆ ಬಾಬೂಜಿಯವರು ಸಹ ಯಾವುದೇ ಸಂಘರ್ಷಕ್ಕೆಡೆ ಮಾಡದೆ ಸಮಯ ಪ್ರಜ್ಞೆಯಿಂದ ಮೌನವಾಗಿ ಅಸ್ಪೃಶ್ಯತೆ ಆಚರಣೆಯ ವಿರುದ್ಧ ಕೆಲಸ ಮಾಡಿರುತ್ತಾರೆ.ಅಂತಹ ಕೆಲಸಗಳ ಬಗ್ಗೆ ಒಂದೆರಡು ಉದಾಹರಣೆಗಳ ಬಗ್ಗೆ ಬೆಳಕು ಚೆಲ್ಲೋಣ.
1) ಜಾತಿ ಆಚರಣೆಗೆ ಬಾಬು ಜಗಜೀವನ ರಾಮ್ ರವರ ವಿರೋಧ: ಜಗಜೀವನ ರಾಮ್ ರವರು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗ ಒಂದು ಘಟನೆ ನಡೆಯುತ್ತದೆ. ಶಾಲೆಯಲ್ಲಿ ವಿಧ್ಯಾರ್ಥಿಗಳಿಗಾಗಿ ನೀರು ತುಂಬಿದ ಎರಡು ಮಣ್ಣಿನ ಮಡಕೆಗಳನ್ನು ಇರಿಸುತ್ತಿದ್ದರು. ಒಂದು ಹಿಂದೂ ವಿಧ್ಯಾರ್ಥಿಗಳಿಗಾದರೆ ಇನ್ನೊಂದು ಮುಸ್ಲಿಂ ವಿಧ್ಯಾರ್ಥಿಗಳ ಉಪಯೋಗಕ್ಕೆಂದು ಇಡಲಾಗಿತ್ತು. ಚಮ್ಮಾರ ಜಾತಿಯ ವಿದ್ಯಾರ್ಥಿಗಳು ಹಿಂದೂ ಮಡಕೆಯಲ್ಲಿನ ನೀರನ್ನೇ ಕುಡಿಯುತ್ತಿದ್ದರು. ಆದರೆ ನೀರು ಹಂಚುವ ಕೆಲಸವನ್ನು “ಸಿಪಾಯಿ” ಮಾಡುತ್ತಿದ್ದನು. ಒಂದು ದಿನ ಸಿಪಾಯಿ ಗೈರು ಹಾಜರಿಯಾಗಿದ್ದಾಗ ಬಾಲಕ ಜಗಜೀವನ ರಾಮನು ಹಿಂದೂ ಮಡಕೆಯಿಂದ ನೀರನ್ನು ಎತ್ತಿಕೊಂಡು ಕುಡಿದ. ಇದನ್ನು ಸವರ್ಣೀಯ ಬಾಲಕರು ನೋಡಿದರು.
ಜಗಜೀವನ ರಾಮನು ಅಸ್ಪೃಶ್ಯ ಜಾತಿಯವನಾಗಿದ್ದರಿಂದ ಹಿಂದೂ ಮಡಕೆಯನ್ನು ಉಪಯೋಗಿಸಿದ್ದನ್ನು ಸವರ್ಣೀಯ ವಿಧ್ಯಾರ್ಥಿಗಳು ವಿರೋಧಿಸಿ ಶಾಲೆಯ ಮುಖ್ಯ ಗುರುಗಳಿಗೆ ದೂರು ನೀಡಿದರು. ಆಗ ಮುಖ್ಯೋಪಾಧ್ಯಾಯರು ಹರಿಜನ ವಿಧ್ಯಾರ್ಥಿಗಳಿಗಾಗಿಯೇ ಬೇರೊಂದು ನೀರಿನ ಮಡಕೆಯನ್ನು ತಂದು ಇರಿಸಿದರು. ಬಾಲಕ ಜಗಜೀವನ ರಾಮನಿಗೆ ಈ ಹೊಸ ವ್ಯವಸ್ಥೆ ಸರಿ ಕಾಣಲಿಲ್ಲ. ಆದರೆ ಬಾಬೂಜಿ ಪ್ರತಿಭಟಿಸಲಿಲ್ಲ. ಸಂಘರ್ಷಕ್ಕೆಡೆ ಮಾಡಲಿಲ್ಲ. ಬುದ್ದಿವಂತಿಕೆಯಿಂದ ಯಾರಿಗೂ ಕಾಣದಂತೆ ಒಂದು ದಿನ ಗುಟ್ಟಾಗಿ ಆ ಹೊಸ ಮಡಕೆಯನ್ನು ಒಡೆದು ಹಾಕಿದ.
ಮುಖ್ಯೋಪಾಧ್ಯಾಯರಿಗೆ ಯಾರು ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗದೆ ಪುನಃ ಹೊಸ ಮಡಕೆಯನ್ನು ತಂದು ಇರಿಸಿದರು. ಅದಕ್ಕೂ ಅದೇ ಗತಿಯಾಯಿತು. ಮುಖ್ಯೋಪಾಧ್ಯಾಯರು ಪರಿಸ್ಥಿತಿಯ ಗಂಭೀರತೆಯನ್ನು ಅವಲೋಕಿಸಿ “ಪ್ರತ್ಯೇಕ ಮಡಕೆಯ ವ್ಯವಸ್ಥೆ” ಯನ್ನೇ ತಪ್ಪಿಸಿ, ವಿಧ್ಯಾರ್ಥಿಗಳೆಲ್ಲರೂ ಒಂದೇ ಮಡಕೆಯ ನೀರನ್ನು ಬಳಸುವಂತೆ ಆದೇಶ ಮಾಡಿದರು. ಜಗಜೀವನ ರಾಮ್ ರವರಿಗೆ ವಿಧ್ಯಾರ್ಥಿಯಾಗಿದ್ದಾಗಲೇ ಜಾತಿ ಆಚರಣೆ ಕುರಿತು ಎಳ್ಳಷ್ಟೂ ಒಪ್ಪಿಗೆಯಿರಲಿಲ್ಲ ಮಾತ್ರವಲ್ಲ ಅದನ್ನು ಕಂಡ ಕೂಡಲೇ ವಿರೋಧಿಸುತ್ತಿದ್ದರೆಂಬುದು ಈ ಶಾಲಾ ಘಟನೆಯಿಂದ ವ್ಯಕ್ತವಾಗುತ್ತದೆ. ಹಾಗೂ ಯಾವುದೇ ಸಂಘರ್ಷಕ್ಕೆಡೆ ಮಾಡದೆ ಬುದ್ದಿವಂತಿಕೆಯಿಂದಲೂ ವ್ಯವಸ್ಥೆಯೊಳಗಿದ್ದೇ ಅಸ್ಪೃಶ್ಯತೆಯ ವಿರುದ್ಧ ಹೋರಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.