ಪಣಜಿ: ಹರಿಯಾಣ ತಂಡ ಫೈನಲ್ನಲ್ಲಿ 5-3 ಗೋಲುಗಳಿಂದ ಕರ್ನಾಟಕ ತಂಡವನ್ನು ಸೋಲಿಸಿ 37ನೇ ರಾಷ್ಟ್ರೀಯ ಕ್ರೀಡೆಗಳ ಹಾಕಿ ಟೂರ್ನಿಯ ಪುರುಷರ ವಿಭಾಗದಲ್ಲಿ ಬುಧವಾರ ಚಿನ್ನ ಗೆದ್ದುಕೊಂಡಿತು. ಇದೇ ವೇಳೆ ಸರ್ವಿಸಸ್ ತಂಡದಿಂದ ಪೈಪೋಟಿ ಎದುರಿಸುತ್ತಿದ್ದರೂ, ಮಹಾರಾಷ್ಟ್ರ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.
ಉತ್ತರ ಪ್ರದೇಶ ತಂಡ ಟೈಬ್ರೇಕರ್ನಲ್ಲಿ 3-1 ಗೋಲುಗಳಿಂದ ಮಹಾರಾಷ್ಟ್ರ ತಂಡವನ್ನು ಸೋಲಿಸಿ ಕಂಚಿನ ಪದಕ ಪಡೆಯಿತು.
ಕೊಕ್ಕೊ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಮಹಾರಾಷ್ಟ್ರ 46-40 ಅಂತರದಲ್ಲಿ ಒಡಿಶಾ ತಂಡವನ್ನು ಸೋಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಕರ್ನಾಟಕ 30-10 ಪಾಯಿಂಟ್ಗಳಿಂದ ಕೇರಳ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು.ಪದಕ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಪೈಪೋಟಿ ನೀಡುತ್ತಿರುವ ಸರ್ವಿಸಸ್ ತಂಡ ಒಂದೇ ದಿನ 10 ಪದಕ ಬಾಚಿಕೊಂಡಿದೆ. ಮಹಾರಾಷ್ಟ್ರ ಇದುವರೆಗೆ 75 ಚಿನ್ನ ಗಳಿಸಿದೆ.
ಬಾಕ್ಸಿಂಗ್, ಯಾಟಿಂಗ್ನಲ್ಲಿ ಪ್ರಾಬಲ್ಯ ಮೆರೆದ ಸರ್ವಿಸಸ್ ಒಟ್ಟು 65 ಚಿನ್ನ ಗಳಿಸಿದೆ. ಸೈಕ್ಲಿಂಗ್-ನವೀನ್ಗೆ ಚಿನ್ನ: ರೋಡ್ ಸೈಕ್ಲಿಂಗ್ ಸ್ಪರ್ಧೆಯ ಪುರುಷರ ಇಂಡಿವಿಜುವಲ್ ಟೈಮ್ ಟ್ರಯಲ್ಸ್ ಸ್ಪರ್ಧೆಯಲ್ಲಿ (41 ಕಿ.ಮೀ.) ಕರ್ನಾಟಕದ ನವೀನ್ ಜಾನ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ತಮಿಳುನಾಡಿನ ಶ್ರೀನಾಥ್ ಲಕ್ಷ್ಮೀಕಾಂತ ಬೆಳ್ಳಿ ಹಾಗೂ ಮಹಾರಾಷ್ಟ್ರದ ಚಿನ್ಮಯ್ ವಿ.ಕೇವಲ್ರಮಣಿ ಕಂಚಿನ ಪದಕ ಗಳಿಸಿದರು.